ಅಜಾನ್ ವಿವಾದ: ಸರ್ಕಾರ ಮತ್ತು ಮುಸ್ಲಿಂ ಎರಡನ್ನೂ ಎಚ್ಚರಿಸಿದರು ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್

ಸುಪ್ರೀಮ್ ಕೋರ್ಟ್ ಆದೇಶವನ್ನು ಜಾರಿಗೊಳಿಸದೆ ಸರ್ಕಾರ ನ್ಯಾಯಾಂಗ ನಿಂದನೆವೆಸಗಿದೆ ಅಂತ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಮತ್ತು ಯಾಕೆ ಕ್ರಮ ತೆಗೆದುಕೊಂಡಿಲ್ಲ ಅಂತ ಸರ್ಕಾರ ನ್ಯಾಯಾಲಯಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.

TV9kannada Web Team

| Edited By: Arun Belly

May 09, 2022 | 6:24 PM

ಅಜಾನ್ ವಿರುದ್ಧ ಪ್ರಮೋದ್ ಮುತಾಲಿಕ್ (Pramod Muthalik) ಅವರ ಶ್ರೀರಾಮ ಸೇನೆ (Sri Rama Sene) ಸಿಡಿದೆದ್ದಿದೆ. ಸೇನೆಯ ಜಿಲ್ಲಾ ಘಟಕಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆರಂಭಿಸಿವೆ. ತಮ್ಮ ಸಂಘಟನೆಯ ಸದಸ್ಯರೊಂದಿಗೆ ಸೋಮವಾರ ಮೈಸೂರಿನ ಶಿವರಾಮ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ (Hanuman Chalisa) ಪಠಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಬಸವರಾಜ ಬೊಮ್ಮಾಯಿ ಸರ್ಕಾರ ಮತ್ತು ಮುಸ್ಲಿಂ ಸಮುದಾಯವರಿಗೆ ಪ್ರತ್ಯೇಕ ಎಚ್ಚರಿಕೆಗಳನ್ನು ನೀಡಿದರು. ಮುಸ್ಲಿಂ ಸಮಾಜ ಉದ್ಧಟತನ ಮತ್ತು ಸೊಕ್ಕಿನಿಂದ ವರ್ತಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಸರ್ಕಾರ ಬಗ್ಗಲಿಲ್ಲ ಅಂತಾದರೆ, ಸುಪ್ರೀಮ್ ಕೋರ್ಟ್ ಆದೇಶವನ್ನು ಜಾರಿಗೊಳಿಸದೆ ಸರ್ಕಾರ ನ್ಯಾಯಾಂಗ ನಿಂದನೆವೆಸಗಿದೆ ಅಂತ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಮತ್ತು ಯಾಕೆ ಕ್ರಮ ತೆಗೆದುಕೊಂಡಿಲ್ಲ ಅಂತ ಸರ್ಕಾರ ನ್ಯಾಯಾಲಯಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.

ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸದ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿರುದ್ಧವೂ ಮೊಕದ್ದಮೆ ಹೂಡಲಾಗುವುದು ಎಂದು ಮುತಾಲಿಕ್ ಹೇಳಿದರು.

ಹಾಗೆಯೇ, ಮುಸಲ್ಮಾನರ ಉದ್ಧಟತನದ ಧೋರಣೆಯಿಂದ ಇಡೀ ಸಮಾಜ ಕಿರಿಕಿರಿ ಅನುಭವಿಸುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತೊಂದರೆಯಾಗುತ್ತಿದೆ, ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನರು ತಾವಾಗಿಯೇ ಶಾಂತ ರೀತಿಯಿಂದ ಧ್ವನಿವರ್ಧಕಗಳ ಮೂಲಕ ಹೊರಬೀಳುವ ಅಜಾನ್ ನ ಡೆಸಿಬಲ್ ಪ್ರಮಾಣವನ್ನು ಕಡಿಮೆ ಮಾಡದಿದ್ದರೆ, ಶ್ರೀರಾಮ ಸೇನೆಯ ಸದಸ್ಯರೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಮುತಾಲಿಕ್ ಎಚ್ಚರಿಸಿದರು.

ಮುತಾಲಿಕ್ ಅವರ ಎಚ್ಚರಿಕೆಗೆ ಸರ್ಕಾರ ಅದರಲ್ಲೂ ವಿಶೇಷವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕಿದೆ.

ಇದನ್ನೂ ಓದಿ:   ಬಿಜೆಪಿಯವರಿಗೆ ದುಡ್ಡಿನದ್ದೇ ಚಿಂತೆ, ಬಿಜೆಪಿ ನಾಯಕರ ವಿರುದ್ಧ ಪ್ರಮೋದ್​ ಮುತಾಲಿಕ್​ ವಾಗ್ದಾಳಿ

Follow us on

Click on your DTH Provider to Add TV9 Kannada