ಬೆಳಗಾವಿ: ತುಂಬಿ ಹರಿಯುತ್ತಿದ್ದ ನದಿಗೆ ಮಗುಚಿ ಬಿದ್ದ ಕಾರ್ಮಿಕರಿದ್ದ ಟ್ರ್ಯಾಕ್ಟರ್
ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮೂಡಲಗಿ ತಾಲೂಕಿನ ಅವರಾದಿ ಬಳಿ 14 ಜನ ಕಾರ್ಮಿಕರಿದ್ದ ಟ್ಯಾಕ್ಟರ್ ಘಟಪ್ರಭಾ ನದಿಗೆ ಮಗುಚಿ ಬಿದ್ದಿದೆ.
ಬೆಳಗಾವಿ, ಜೂನ್ 09: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಗೆ (Ghataprabha River) ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮೂಡಲಗಿ (Mudalagi) ತಾಲೂಕಿನ ಅವರಾದಿ ಗ್ರಾಮದ ಬಳಿ ಕಾರ್ಮಿಕರಿದ್ದ ಟ್ಯಾಕ್ಟರ್ ಘಟಪ್ರಭಾ ನದಿಗೆ ಮಗುಚಿ ಬಿದ್ದಿದೆ. 13 ಜನ ಕಾರ್ಮಿಕರು ಈಜಿ ದಡ ಸೇರಿದ್ದಾರೆ. ಓರ್ವ ಕಾರ್ಮಿಕ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಕಾರ್ಮಿಕರು ಬಾಗಲಕೋಟೆ (Bagalkote) ಜಿಲ್ಲೆಯ ನಂದಗಾಂವ್ ಗ್ರಾಮದಿಂದ ಮೂಡಲಗಿ ತಾಲೂಕಿನ ಅವರಾದಿ ಗ್ರಾಮಕ್ಕೆ ತೆರಳುತ್ತಿದ್ದರು. ಅವರಾದಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಕಟ್ಟಲಾಗಿದೆ. ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಮೂರು ಅಡಿ ನೀರು ಹರಿಯುತ್ತಿದೆ. ಆದರೂ, ಕೂಡ ಚಾಲಕ ಟ್ರ್ಯಾಕ್ಟರ್ ನಿಲ್ಲಿಸದೆ ಬ್ರಿಡ್ಜ್ ಮೇಲೆ ಹೋಗಿದ್ದಾನೆ. ಅರ್ಧ ದಾರಿಗೆ ಹೋಗುತ್ತಿದ್ದಂತೆ ನೀರಿನ ರಬಸಕ್ಕೆ ಟ್ರ್ಯಾಕ್ಟರ್ ನದಿಯಲ್ಲಿ ಮಗುಚಿ ಬಿದ್ದಿದೆ. ಸ್ಥಳಕ್ಕೆ ಕುಲಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಘಟಪ್ರಭಾ ನದಿಯಲ್ಲಿ ನಾಪತ್ತೆಯಾದ ಕಾರ್ಮಿಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.