ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ಹಿಂದೂ ಸಂಪ್ರದಾಯದಂತೆ ನಡೆಯಿತು ಅದ್ದೂರಿ ಮದುವೆ
ಅಪರೂಪದ ಅಂತಾರಾಷ್ಟ್ರೀಯ ವಿವಾಹಕ್ಕೆ ಐತಿಹಾಸಿಕ ಬೇಲೂರು ಭಾನುವಾರ ಸಾಕ್ಷಿಯಾಯಿತು. ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ಯುವತಿ ಹೇಮಶ್ರಿ ಮತ್ತು ಇಂಗ್ಲೆಂಡಿನ ಯುವಕ ಜಾಯ್ ಪರಸ್ಪರ ಪ್ರೀತಿಸುತ್ತಿದ್ದು, ಪೋಷಕರ ಸಮ್ಮತಿಯೊಂದಿಗೆ ಭಾನುವಾರ ವಿವಾಹವಾದರು. ಹಿಂದೂ ಸಂಪ್ರದಾಯದಂತೆ ಸಾಂಪ್ರದಾಯಿಕವಾಗಿ ಮದುವೆ ಸಮಾರಂಭ ನೆರವೇರಿತು. ಮದುವೆ ಬಗ್ಗೆ ಯುವತಿ ಹೇಳಿದ್ದೇನು ನೋಡಿ.
ಹಾಸನ, ಡಿಸೆಂಬರ್ 15: ಪ್ರೀತಿ ಕುರುಡು ಎನ್ನುತ್ತಾರೆ. ಅದೀಗ ಮತ್ತೆ ಸಾಬೀತಾಗಿದೆ. ಇಂಗ್ಲೆಂಡಿನ ಯುವಕ ಜಾಯ್ ಹಾಗೂ ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ಯುವತಿ ಹೇಮಶ್ರಿ ಪರಸ್ಪರ ಪ್ರೀತಿಸಿ ವಿವಾಹ ಬಂಧನಕ್ಕೆ ಕಾಲಿಟ್ಟ ಅಪರೂಪದ ಕ್ಷಣಕ್ಕೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಭಾನುವಾರ ಸಾಕ್ಷಿಯಾಯಿತು. ಕಳೆದ ಕೆಲ ವರ್ಷಗಳಿಂದ ಹೇಮಶ್ರಿ ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಕೆಲಸ ಮಾಡುತ್ತಿದ್ದ ಅದೇ ಕಂಪನಿಯಲ್ಲಿ ಜಾಯ್ ಕೂಡ ಉದ್ಯೋಗದಲ್ಲಿದ್ದ. ಸಹೋದ್ಯೋಗಿತನದಿಂದ ಆರಂಭವಾದ ಪರಿಚಯ ಕ್ರಮೇಣ ಪ್ರೀತಿಯಾಗಿ ಬೆಳೆಯಿತು. ತಮ್ಮ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು, ಭಾನುವಾರ ಐತಿಹಾಸಿಕ ಬೇಲೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ನವದಂಪತಿಗಳು ಕಾಲಿಟ್ಟರು.
ವಿವಾಹ ಸಮಾರಂಭವು ಸಂಪ್ರದಾಯಬದ್ಧವಾಗಿ, ಸಂಭ್ರಮ ಹಾಗೂ ಸಂತಸದಿಂದ ನಡೆಯಿತು. ಜಾಯ್ ಹಾಗೂ ಹೇಮಶ್ರಿಯ ಪೋಷಕರು ನವದಂಪತಿಗೆ ಆಶೀರ್ವಾದ ನೀಡಿ ಶುಭ ಹಾರೈಸಿದರು. ಸಂಬಂಧಿಕರು ಹಾಗೂ ಸ್ನೇಹಿತರು ಕೂಡ ಈ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದರು.
