ದೆಹಲಿಯಲ್ಲಿ ಪ್ರಧಾನಿ ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರಿನ ರಸ್ತೆ ಗುಂಡಿಗಳ ಮುಚ್ಚುವ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಇದು ಕರ್ನಾಟಕದ್ದೊಂದೇ ಸಮಸ್ಯೆ ಅಲ್ಲ ಎಂದರು. ಅಲ್ಲದೆ, ಪ್ರಧಾನಿ ಮೋದಿ ಅವರ ದೆಹಲಿ ನಿವಾಸದ ಮುಂದಿನ ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ ನೋಡಿಬನ್ನಿ ಎಂದು ಮಾಧ್ಯಮದವರಿಗೆ ಹೇಳಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ, ಇದನ್ನು ಐಟಿ ಕಂಪನಿಗಳು ಅರ್ಥ ಮಾಡಿಕೊಳ್ಳಲಿ ಎಂದರು.
ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಪ್ರತಿ ದಿನ ಸುಮಾರು 1000 ಗುಂಡಿಗಳನ್ನು ಮುಚ್ಚುವ ಕೆಲಸ ಜಿಬಿಎ ಕಡೆಯಿಂದ ಆಗುತ್ತಿದೆ, ಇದನ್ನು ಐಟಿ ಕಂಪನಿಗಳು ತಿಳಿದುಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಒಂದು ಸುತ್ತು ಬಂದು ಎಲ್ಲ ನೋಡಿದೆ. ಇದೆಲ್ಲ ಆದಮೇಲೆ ನೀವೆಲ್ಲ ನಿಮ್ಮ ವರದಿಗಾರರನ್ನು ಕಳುಹಿಸಿ ದೆಹಲಿಯಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ, ಪ್ರಧಾನ ಮಂತ್ರಿಗಳ ಮನೆ ಮುಂದಿನ ರಸ್ತೆಯಲ್ಲಿ ಎಷ್ಟಿವೆ ಎಂಬುದನ್ನು ನೋಡಬೇಕಾಗುತ್ತದೆ ಎಂದರು.
ಎಲ್ಲ ಕ್ಷೇತ್ರಗಳಲ್ಲೂ ರಸ್ತೆ ಗುಂಡಿಗಳು ಇರುತ್ತವೆ. ದೇಶದ ಎಲ್ಲೆಡೆ ಇರುವ ಸಮಸ್ಯೆ ಇದು. ಹಾಗಂತ ನಮ್ಮ ಕೆಲಸ ನಾವು ಮಾಡುತ್ತೇವೆ. ಇದನ್ನೇ ದೊಡ್ಡ ವಿಷಯ ಮಾಡಿ ಮಾಧ್ಯಮಗಳಲ್ಲಿ ಬಿಂಬಿಸುವ ಅಗತ್ಯವಿಲ್ಲ. ಇದು ಬರೀ ಕರ್ನಾಟಕ ರಾಜ್ಯದ ಸಮಸ್ಯೆ ಒಂದೇ ಅಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು. ಅಲ್ಲದೆ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸರಿಯಾಗಿ ರಸ್ತೆ ಮಾಡಿದ್ದರೆ ಈಗ ಸಮಸ್ಯೆಯೇ ಇರುತ್ತಿರಲಿಲ್ಲ. ಚುನಾವಣೆ ಹತ್ತಿರ ಬರುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
