ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಐಎಎಸ್ ಅಧಿಕಾರಿ ಕರಿಗೌಡ ವಿರುದ್ಧ ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮದ ಆರೋಪ ಕೇಳಿಬಂದಿದೆ. ಐಎಎಸ್ ಅಧಿಕಾರಿ ಕರಿಗೌಡ ಸೇರಿದಂತೆ ಘನತ್ಯಾಜ್ಯ ನಿರ್ವಹಣಾ ಕಂಪನಿಯ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ED) ದೂರು ನೀಡಲಾಗಿದೆ. ತ್ಯಾಜ್ಯ ವರ್ಗಾವಣೆ ಕೇಂದ್ರಗಳ ಟೆಂಡರ್‌ನಲ್ಲಿ ನಿಯಮ ಉಲ್ಲಂಘನೆ, ಭದ್ರತಾ ಠೇವಣಿಯಲ್ಲಿ ವಿನಾಯಿತಿ ನೀಡಿದ ಆರೋಪಗಳು ಕೇಳಿಬಂದಿವೆ. ಅಕ್ರಮದ ಬಗ್ಗೆ ಈಗಾಗಲೇ ಸಿಎಂ ಡಿಕೆಶಿ ತನಿಖೆಗೆ ಆದೇಶಿಸಿದ್ದಾರೆ ಎಂಬುದಿಲ್ಲಿ ಗಮನಾರ್ಹ.
ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಕಂಪನಿಯಿಂದ ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ ಕೇಳಿಬಂದಿದೆ. ಐಎಎಸ್ ಅಧಿಕಾರಿ ಕರಿಗೌಡ ಸೇರಿದಂತೆ ಕಸ ವಿಲೇವಾರಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧವೂ ಇಡಿಗೆ ದೂರು ಸಲ್ಲಿಕೆಯಾಗಿದೆ. ಅಕ್ರಮದ ಬಗ್ಗೆ ಈಗಾಗಲೇ ಸಿಎಂ ಡಿಕೆಶಿ ತನಿಖೆಗೆ ಆದೇಶಿಸಿದ್ದಾರೆ. ಟೆಂಡರ್, ಗುತ್ತಿಗೆ, ಭದ್ರತಾ ಠೇವಣಿ, ಕಾರ್ಯಾದೇಶದಲ್ಲಿ ನ್ಯೂನತೆ ಆರೋಪ ಸಂಬಂಧ ವಾರದಲ್ಲಿ ವರದಿ ನೀಡುವಂತೆ ಜಿಬಿಎ ಆಯುಕ್ತರಿಗೆ ಸೂಚಿಸಿದ್ದರು. ಪ್ಯಾಕೇಜ್ 1, 2 ಮತ್ತು 5ರ ಟೆಂಡರ್‌ಗಳ ಕೂಲಂಕಷ ಪರಿಶೀಲನೆಗೆ ತಿಳಿಸಲಾಗಿದ್ದು, ಪ್ಯಾಕೇಜ್ 2, 5ನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಲಾಗಿತ್ತು. ಟೆಂಡರ್ ನಿಯಮ ಹಾಗೂ ಭದ್ರತಾ ಠೇವಣಿಯಲ್ಲಿ ವಿನಾಯಿತಿ ನೀಡಲಾಗಿದ್ದು, ಸುಮಾರು 150 ಕೋಟಿ ರೂ. ಸ್ವಚ್ಛ ಭಾರತ ನಿಧಿಯಲ್ಲೂ ದುರ್ಬಳಕೆ ಆರೋಪ ಕೇಳಿಬಂದಿದೆ. ಪ್ಯಾಕೇಜ್ 2 ಮತ್ತು 5 ಎಸ್‌ಟಿಎಸ್ ಸ್ಥಾಪನೆಗೆ ಕರೆದಿದ್ದ ಟೆಂಡರ್‌ನಲ್ಲಿ ಮುನಿಯಪ್ಪ ಎಂಟರ್‌ಪ್ರೈಸಸ್ ಭಾಗಿಯಾಗಿತ್ತು ಮತ್ತು ನಿಗದಿತ ಮೊತ್ತಕ್ಕಿಂತ ಕಡಿಮೆಗೆ ಬಿಡ್ ಸಲ್ಲಿಸಿತ್ತು. ಪ್ಯಾಕೇಜ್ 2ರ ಟೆಂಡರ್ ಮೊತ್ತ 53.4 ಕೋಟಿ ರೂಪಾಯಿ ಆದರೆ 33.63 ಕೋಟಿ ರೂಪಾಯಿಗೆ ಗುತ್ತಿಗೆ ನೀಡಲಾಗಿತ್ತು. ಪ್ಯಾಕೇಜ್ 5ರ ಟೆಂಡರ್ ಮೊತ್ತ 55.4 ಕೋಟಿ ರೂಪಾಯಿ ಆದರೆ ಇದನ್ನು 38.42 ಕೋಟಿ ರೂಪಾಯಿಗೆ ಟೆಂಡರ್ ನೀಡಲಾಗಿತ್ತು. ಹೀಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂದು ಇಡಿಗೆ ದೂರು ಸಲ್ಲಿಕೆಯಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
