ಬೆಂಗಳೂರಿನಲ್ಲಿ ಮಳೆಯಲ್ಲೇ ರಸ್ತೆಗೆ ಡಾಂಬರೀಕರಣ: ಜಿಬಿಎ ಅಧಿಕಾರಿಗಳ ಮಹಾ ಎಡವಟ್ಟು
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೂ ರಸ್ತೆ ಡಾಂಬರೀಕರಣ ಕಾರ್ಯ ನಡೆಸಿ ಜಿಬಿಎ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಕುಂದಲಹಳ್ಳಿ-ಶೋಭಾ ಡ್ರೀಮ್ಸ್ ರಸ್ತೆಯಲ್ಲಿ ಮಳೆಯಲ್ಲೇ ಡಾಂಬರು ಹಾಕುವ ಕೆಲಸ ನಡೆದಿದೆ. ಕಳಪೆ ಕಾಮಗಾರಿಯಿಂದ ಹೊಸದಾಗಿ ಹಾಕಿದ ರಸ್ತೆಗಳು ಒಂದು ವಾರದಲ್ಲೇ ಹದಗೆಟ್ಟಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದರೂ, ರಸ್ತೆಗೆ ಡಾಂಬರೀಕರಣ ಮಾಡುವ ಮೂಲಕ ಜಿಬಿಎ ಕಳಪೆ ಕಾಮಗಾರಿಯ ಯಡವಟ್ಟು ಮಾಡಿಕೊಂಡಿದೆ. ಮಳೆಯಿಂದ ರಸ್ತೆಗಳು ಕೊಚ್ಚಿಹೋಗುತ್ತಿರುವಾಗಲೇ, ಕುಂದಲಹಳ್ಳಿ-ಶೋಭಾ ಡ್ರೀಮ್ಸ್ ಮಾರ್ಗದಲ್ಲಿ ಗುಂಡಿ ಮುಚ್ಚುವ ನೆಪದಲ್ಲಿ ಡಾಂಬರೀಕರಣ ನಡೆಸಲಾಗಿದೆ. ಈ ಕುರಿತು ಸಾರ್ವಜನಿಕರು ‘ಟಿವಿ9’ಗೆ ಮಾಹಿತಿ ನೀಡಿದಾಗ, ಸ್ಥಳಕ್ಕಾಗಮಿಸಿದ ವರದಿಗಾರರಿಗೆ ಮಳೆಯ ನಡುವೆಯೂ ನಡೆಯುತ್ತಿದ್ದ ಡಾಂಬರೀಕರಣ ಕಾರ್ಯ ಕಂಡುಬಂದಿದೆ. ಕ್ಯಾಮರಾ ಕಂಡ ಕೂಡಲೇ ಕೆಲಸದವರು ಮತ್ತು ಗುತ್ತಿಗೆದಾರರು ಸ್ಥಳದಿಂದ ಓಡಿಹೋಗಿದ್ದಾರೆ. ನಂತರ ಬಂದ ಗುತ್ತಿಗೆದಾರರೊಬ್ಬರು, ‘ಮಳೆ ಬರುವ ಮೊದಲು ಸಿದ್ಧತೆ ಮಾಡಿಕೊಂಡಿದ್ದೆವು, ವಸ್ತುಗಳು ಹಾಳಾಗಬಾರದೆಂದು ಮಳೆಯಲ್ಲಿಯೇ ಹಾಕಿ ಹೋಗುತ್ತಿದ್ದೇವೆ’ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ನೀರು ಮತ್ತು ಮಣ್ಣಿದ್ದಾಗ ಹಾಕಿದ ಡಾಂಬರು ಬೇಗ ಕಿತ್ತುಬರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಈ ಕೆಲಸ ನಡೆದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ.
