ಬೆಂಗಳೂರು: ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಹೃದಯ ಸಾಗಾಟ!
ನಮ್ಮ ಮೆಟ್ರೋದಲ್ಲಿ ಪ್ರಥಮ ಬಾರಿಗೆ ಈ ವರ್ಷ ಅಗಸ್ಟ್ 1 ರಂದು ಮಾನವ ಯಕೃತ್ತನ್ನು (ಲಿವರ್) ಯಸ್ವಿಯಾಗಿ ಸಾಗಾಟ ಮಾಡಲಾಗಿತ್ತು. ಅದರೊಂದಿಗೆ, ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿತ್ತು. ಇದೀಗ ಸೆಪ್ಟೆಂಬರ್ 12ರ ರಾತ್ರಿ ಯಶಸ್ವಿಯಾಗಿ ಮಾನವ ಹೃದಯ ಸಾಗಾಟ ಮಾಡಲಾಗಿದೆ. ಇದರೊಂದಿಗೆ, ಮತ್ತೊಂದು ಮೈಲಿಗಲ್ಲನ್ನು ಮೆಟ್ರೋ ಸಾಧಿಸಿದೆ. ಮೆಟ್ರೋದಲ್ಲಿ ಹೃದಯ ಸಾಗಾಟದ ವಿಡಿಯೋ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 12: ನಮ್ಮ ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಹೃದಯ ಸಾಗಾಟ ಮಾಡಲಾಗಿದೆ. ಇದರೊಂದಿಗೆ, ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿದೆ. ಯಶವಂತಪುರ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರ ಬಳಿಯ ಅಪೋಲೋ ಆಸ್ಪತ್ರೆಗೆ ಗುರುವಾರ ರಾತ್ರಿ ಹೃದಯವನ್ನು ಸಾಗಿಸಲಾಗಿದೆ. ಯಶವಂತಪುರ ಇಂಡಸ್ಟ್ರಿ ಮೆಟ್ರೋ ಸ್ಟೇಷನ್ನಿಂದ ಸಂಪಿಗೆ ರೋಡ್ ಸ್ಟೇಷನ್ವರೆಗೆ ಮೆಟ್ರೋದಲ್ಲಿ ಹೃದಯ ಸಾಗಿಸಲಾಯಿತು. ಸ್ಪರ್ಶ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಯಶವಂತಪುರ ಇಂಡಸ್ಟ್ರಿ ವರೆಗೆ ಹೃದಯವನ್ನು ಕೊಂಡೊಯ್ಯಲಾಯಿತು. ಅಲ್ಲಿಂದ ಮೆಟ್ರೋ ರೈಲಿನ ಮೂಲಕ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ ವರೆಗೆ ಒಯ್ಯಲಾಯಿತು. ಅಲ್ಲಿಂದ ಮತ್ತೆ ಆ್ಯಂಬುಲೆನ್ಸ್ ಮೂಲಕ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಶಿಫ್ಟ್ ಮಾಡಲಾಗಿದೆ.
ಮೆಟ್ರೋ ರೈಲಿನ ಒಂದು ಕೋಚ್ ಅನ್ನು ಹೃದಯ ಸಾಗಿಸಲು ಮೀಸಲಿಡಲಾಗಿತ್ತು. ಎಂದಿನಂತೆ ಸಂಚಾರ ಮಾಡುವ ಪ್ರಯಾಣಿಕರ ರೈಲಿನಲ್ಲೇ ಹೃದಯವನ್ನು ಸಾಗಿಸಲಾಗಿದೆ. ರಾತ್ರಿ 11.1 ಕ್ಕೆ ಯಶವಂತಪುರ ಇಂಡಸ್ಟ್ರಿಯಿಂದ ಹೊರಟ ರೈಲು 11.21 ಕ್ಕೆ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ ತಲುಪಿದೆ. ಯಶವಂತಪುರ ಇಂಡಸ್ಟ್ರಿಯಿಂದ ಸಂಪಿಗೆ ಮೆಟ್ರೋ ಸ್ಟೇಷನ್ ನಡುವೆ ಏಳು ಮೆಟ್ರೋ ಸ್ಟೇಷನ್ಗಳಿವೆ ಕೇವಲ 20 ನಿಮಿಷದಲ್ಲಿ ಯಶವಂತಪುರ ಇಂಡಸ್ಟ್ರಿ ಯಿಂದ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ ತಲುಪಿದೆ. ಈ ವೇಳೆ ಮೆಟ್ರೋ ಭದ್ರತಾ ಅಧಿಕಾರಿಗಳು ಮತ್ತು ವೈದ್ಯರು ಹಾಜರಿದ್ದರು.
ಇದನ್ನೂ ಓದಿ: ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ