Bengaluru Rains: ಕೆಂಪೇಗೌಡ ವಿಮಾನ ನಿಲ್ದಾಣದ ‘ಟರ್ಮಿನಲ್​ 2’ ಚಾವಣಿಯಲ್ಲಿ ಸೋರಿಕೆ, ಏರ್​​ಪೋರ್ಟ್​​​​ನೊಳಗೆ ನುಗ್ಗಿದ ನೀರು

Bengaluru Rains: ಕೆಂಪೇಗೌಡ ವಿಮಾನ ನಿಲ್ದಾಣದ ‘ಟರ್ಮಿನಲ್​ 2’ ಚಾವಣಿಯಲ್ಲಿ ಸೋರಿಕೆ, ಏರ್​​ಪೋರ್ಟ್​​​​ನೊಳಗೆ ನುಗ್ಗಿದ ನೀರು

ನವೀನ್ ಕುಮಾರ್ ಟಿ
| Updated By: Ganapathi Sharma

Updated on:May 10, 2024 | 10:40 AM

Kempegowda International Airport Terminal 2: ಬೆಂಗಳೂರು ನಗರದಲ್ಲಿ ಮತ್ತು ಹೊರವಲಯದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಬಿಟ್ಟಿಲ್ಲ. ವಿಮಾನ ನಿಲ್ದಾಣದ ಟರ್ಮಿನಲ್ 2ರ ಮೇಲ್ಚಾವಣಿ ಸೋರಿಕೆಯಾಗಿದ್ದು, ವಿಮಾನ ನಿಲ್ದಾಣದ ಒಳಗೆ ನೀರು ನುಗ್ಗಿದೆ. ಸಂಬಂಧಿತ ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಮೇ 10: ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆ (Bengaluru Rains) ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಕ್ಕೂ (Kempegowda International Airport) ನೀರು ನುಗ್ಗಿದೆ. ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್​​​ (Terminal 2) ಮೇಲ್ಚಾವಣಿಯಿಂದ ಮಳೆ ನೀರು ಸೋರಿಕೆಯಾಗಿದ್ದು ಲಗೇಜ್ ಬೇ ಬಳಿ ನೀರು ಬಂದಿದೆ. ಇದರಿಂದಾಗಿ ಸಿಬ್ಬಂದಿ ಪರದಾಡುವಂತಾಗಿದೆ.

ವಿಮಾನ ನಿಲ್ದಾಣ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಬಾರಿ ಮಳೆ ಸುರಿದಿದೆ. ಹೀಗಾಗಿ 18ಕ್ಕೂ ಹೆಚ್ಚು ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಉದ್ಘಾಟನೆಯಾಗಿ ಎರಡು ವರ್ಷವೂ ಪೂರ್ಣವಾಗಿಲ್ಲ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ 2023ರ ಆಗಸ್ಟ್ 31 ರಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಂದು ಬೆಳಿಗ್ಗೆ ಅಂತರರಾಷ್ಟ್ರೀಯ ವಿಮಾನಗಳ ಆಗಮನ, ನಿರ್ಗಮನ ಶುರುವಾಗಿತ್ತು. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022 ರ ನವೆಂಬರ್​​ನಲ್ಲಿ ಉದ್ಘಾಟಿಸಿದ್ದರು. ಟರ್ಮಿನಲ್‌ನಲ್ಲಿ ದೇಶೀಯ ವಿಮಾನ ಕಾರ್ಯಾಚರಣೆಗಳು 2023 ರ ಜನವರಿ 15 ರಂದು ಪ್ರಾರಂಭವಾಗಿತ್ತು.

ಇಷ್ಟೇ ಅಲ್ಲದೆ ಬೆಂಗಳೂರು ಮಳೆಯಿಂದ ಸಾಲು ಸಾಲು ಅವಾಂತರಗಳು ಸಂಭವಿಸಿವೆ. ರಾಜರಾಜೇಶ್ವರಿ ನಗರದ ನೃಪತುಂಗ ರಸ್ತೆಯಲ್ಲಿ ಗಾಳಿ ಮಳೆಯಿಂದ ನಾಲ್ಕೈದು ಮರಗಳು ಧರೆಗುರುಳಿದ್ದು ಜನರಿಗೆ ಓಡಾಡಲು ಜಾಗವಿಲ್ಲದಂತಾಗಿದೆ. ಮತ್ತೊಂದೆಡೆ, ನಾಗರಬಾವಿಯ ಎನ್​ಜಿಎಫ್ ಲೇಔಟ್​​ನಲ್ಲಿ ಮರ ಮತ್ತು ವಿದ್ಯುತ್ ಕಂಬ ಶೆಡ್ ಮೇಲೆ ಬಿದ್ದಿದ್ದು, ರಾಯಚೂರಿನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕುಟುಂಬವನ್ನು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ರಾಯಚೂರು ಮೂಲದ ಶಿವು, ಅವರ ಮಕ್ಕಳು ಮತ್ತು ಪತ್ನಿ ಇಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಮೇ 12ರ ವರೆಗೂ ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆ, ಗುರುವಾರದ ಮಳೆಗೆ ಎಲ್ಲೆಲ್ಲಿ ಏನೇನಾಯ್ತು?

ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಗಾಳಿ ಮಳೆಗೆ ಸುಮಾರು 70 ಮರಗಳು ಧರೆಗೆ ಉರುಳಿವೆ. ಬೆಂಗಳೂರು ದಕ್ಷಿಣ ವಲಯದಲ್ಲಿ 10, ಆರ್ ಆರ್ ನಗರ ವಲಯದಲ್ಲಿ 32, ಬೊಮ್ಮನಹಳ್ಳಿಯಲ್ಲಿ 06, ಪಶ್ಚಿಮ ವಲಯದಲ್ಲಿ 10, ಮಹಾದೇವಪುರದಲ್ಲಿ 01, ಯಲಹಂಕದಲ್ಲಿ 03, ಪೂರ್ವ ವಲಯದಲ್ಲಿ 06, ದಾಸರಹಳ್ಳಿ ವಲಯದಲ್ಲಿ 02 ಸೇರಿ 70 ಮರಗಳು ಧರಾಶಾಯಿಯಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 10, 2024 10:27 AM