
ಬೆಂಗಳೂರು, ಜನವರಿ 13: ಮೂವತ್ತು ಹೆಚ್ಚು ರಾಬರಿ ಮಾಡಿದ್ದ ಖತರ್ನಾಕ್ ಗ್ಯಾಂಗ್ನ ಖೆಡ್ಡಾಕೆ ಕೆಡವುವಲ್ಲಿ ಬೆಂಗಳೂರಿನ ಕೆಂಗೇರಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹೊಸ ವರ್ಷದ ಹಿಂದಿನ ದಿನ ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿದ್ದ 1 ಲಕ್ಷ ರೂಪಾಯಿ ದರೋಡೆ ಮಾಡಿತ್ತು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಈ ಹಿಂದೆ ಇಂತಹುದೇ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು ಎಂಬುದು ಕೂಡ ತನಿಖೆ ವೇಳೆ ಬಯಲಾಗಿದೆ.
ಬಂಧಿತ ಆರೋಪಿಗಳಾದ ಸುರೇಶ್ ಅಲಿಯಾಸ್ ಸೂರಿ, ಶಶಿಕುಮಾರ್ ಮತ್ತು ಅಕಿಲ್ ಅಲಿಯಾಸ್ ಕೋಜ ಚಿಕ್ಕ ವಯಸ್ಸಿನಲ್ಲಿಯೇ ದರೋಡೆ ನಡೆಸಲು ಆರಂಭಿಸಿದ್ದರು. ಹಣ ನೀಡದಿದ್ರೆ ಚಾಕು, ಚೂರಿಯಿಂದ ಹಲ್ಲೆ ನಡೆಸಿ ಗ್ಯಾಂಗ್ ಎಸ್ಕೇಪ್ ಆಗುತ್ತಿತ್ತು. ನಗರದ ಹೊರವಲಯಗಳಲ್ಲಿ ರಾತ್ರಿ ವೇಳೆ ರಾಬರಿ ಮಾಡುತ್ತಿದ್ದ ಆರೋಪಿಗಳು, ಹಲವರನ್ನು ಬೆದರಿಸಿ ಸುಲಿಗೆ ಮಾಡಿದ್ದರು. ಸೂರ್ಯ ಸಿಟಿ, ಮಾದನಾಯಕನಹಳ್ಳಿ, ಹೆಬ್ಬಗೋಡಿ, ಬ್ಯಾಡರಹಳ್ಳಿ, ಸೇರಿದಂತೆ ಹಲವು ಕಡೆ ತಮ್ಮ ಬುದ್ಧಿ ತೋರಿದ್ದರು. ಬ್ಯಾಡರಹಳ್ಳಿ ಲಾರಿ ಚಾಲಕ, ಮಾದನಾಯಕನಹಳ್ಳಿಯಲ್ಲಿ ವಕೀಲರೋರ್ವರನ್ನೂ ಗ್ಯಾಂಗ್ ದೋಚಿತ್ತು. ಸಾಲದ್ದಕ್ಕೆ ಮಹದೇಶ್ವರ ಬೆಟ್ಟಕ್ಕೆ ಜಾಲಿ ಟ್ರಿಪ್ ಹೋಗಿದ್ದ ಆರೋಪಿಗಳು ಅಲ್ಲಿಯೂ ಪ್ರೇಮಿಗಳನ್ನ ಹೆದರಿಸಿ ದರೋಡೆ ಮಾಡಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಾಲ ಕಾರಾಗೃಹಕ್ಕೆ ಕಳುಹಿಸಿದ್ದರು.
ಇದನ್ನೂ ಓದಿ: ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ; ಸಿನಿಮಾ ಸ್ಟೈಲ್ನಲ್ಲಿ ನಡೀತು ಹತ್ಯೆ!
ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿಗಳು ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಹೊಸ ವರ್ಷದ ಹಿಂದಿನ ದಿನವೂ ದರೋಡೆ ನಡೆಸಿ, ಈಗ ಮತ್ತೆ ಖಾಕಿ ಕೈಲಿ ತಗಲಾಕಿಕೊಂಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಅಪರಾಧ ಕೃತ್ಯಗಳನ್ನು ಎಸಗಿ ಒಮ್ಮೆ ಶಿಕ್ಷೆ ಅನುಭವಿಸಿದರೂ ಗ್ಯಾಂಗ್ ಬುದ್ಧಿ ಕಲಿಯದೇ ಇರೋದು ನಿಜಕ್ಕೂ ದುರ್ದೈವವೇ ಸರಿ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.