AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ

ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ

ಗಣಪತಿ ಶರ್ಮಾ
|

Updated on: Jun 19, 2026 | 7:21 AM

Share

ಬೆಂಗಳೂರಿನ ವರ್ತೂರಿನ ಬೆಳಗೆರೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ದುರಂತ ಸಂಭವಿಸಿದೆ. ಮೂವರು ಕಾರ್ಮಿಕರಲ್ಲಿ ಇಬ್ಬರು ಆಯತಪ್ಪಿ ಬಿದ್ದು ನಾಪತ್ತೆಯಾಗಿದ್ದಾರೆ. ಒಬ್ಬರನ್ನು ರಕ್ಷಿಸಲಾಗಿದ್ದು, ಬಿಹಾರದ ಬ್ರಿಜೇಶ್ ಮತ್ತು ತಮಿಳುನಾಡಿನ ಅಖಿಲೇಶ್ ಎಂಬ ಇಬ್ಬರು ಕಾರ್ಮಿಕರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ 40 ಅಡಿ ಆಳದ ಟ್ಯಾಂಕ್‌ಗೆ ಇಳಿದಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಬೆಂಗಳೂರು, ಜೂನ್ 19: ಬೆಂಗಳೂರಿನ ವರ್ತೂರಿನ ಬೆಳಗೆರೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಆತಂಕಕಾರಿ ಘಟನೆ ನಡೆದಿದ್ದು, ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಸುಮಾರು 40 ಅಡಿ ಆಳದ ಟ್ಯಾಂಕ್‌ಗೆ ಇಳಿದಿದ್ದಾಗ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದಿದ್ದಾರೆ. ಬಿಹಾರದ ಬ್ರಿಜೇಶ್ ಮತ್ತು ತಮಿಳುನಾಡಿನ ಅಖಿಲೇಶ್ ನಾಪತ್ತೆಯಾಗಿದ್ದು, ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ. ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಟ್ಯೂಬ್ ಅಥವಾ ಆಮ್ಲಜನಕ ಕಿಟ್‌ಗಳನ್ನು ಬಳಸದೆ ಟ್ಯಾಂಕ್‌ಗೆ ಇಳಿದಿದ್ದರು, ಇದರಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಸದ್ಯ ನಾಪತ್ತೆಯಾಗಿರುವ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಬಿಡಬ್ಲ್ಯೂಎಸ್ಎಸ್‌ಪಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ನಲ್ಲಿ ಲಕ್ಷಾಂತರ ಲೀಟರ್ ಸೀವೇಜ್ ನೀರು ಸಂಗ್ರಹವಾಗುತ್ತದೆ. ಕಾರ್ಮಿಕರು ಡ್ರೈನೇಜ್ ಪ್ಲ್ಯಾಂಟ್‌ನ ಒಳಗೆ ಏಣಿ ಮೂಲಕ ಇಳಿದು ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಟ್ಯಾಂಕ್ ಒಳಭಾಗದಲ್ಲಿ ಆಮ್ಲಜನಕದ ಕೊರತೆ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಕೆಲಸಗಾರರಿಗೆ ಸುರಕ್ಷತಾ ಕಿಟ್, ಆಮ್ಲಜನಕ ಉಪಕರಣ ಹಾಗೂ ಇತರ ರಕ್ಷಣಾ ಸಾಧನಗಳನ್ನು ಒದಗಿಸುವುದು ಕಡ್ಡಾಯ. ಆದರೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಒಳಗೆ ಇಳಿಸಲಾಗಿತ್ತು ಎಂಬ ಆರೋಪಗಳೂ ಈಗ ಕೇಳಿಬಂದಿವೆ. ಕೋರಮಂಗಲದಿಂದ ವರ್ತೂರು ಭಾಗದವರೆಗೆ ಹರಿದು ಬರುವ ಡ್ರೈನೇಜ್ ನೀರು ಈ ಘಟಕಕ್ಕೆ ಬರುತ್ತದೆ. ಟ್ಯಾಂಕ್‌ನಲ್ಲಿ ಸುಮಾರು ಹತ್ತು ಅಡಿ ಎತ್ತರದವರೆಗೆ ಕೊಳಚೆ ನೀರು ಸಂಗ್ರಹವಾಗಿದ್ದು, ಅಲ್ಲಿಂದ ದೊಡ್ಡ ಪೈಪ್‌ಗಳ ಮೂಲಕ ನೀರನ್ನು ಫಿಲ್ಟರ್ ಮಾಡುವ ಪ್ರಕ್ರಿಯೆ ನಡೆಯುತ್ತದೆ.

ವರದಿ: ನಟರಾಜ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us