ಮುಖ್ಯಮಂತ್ರಿ ಕಾನೂನು ಹೋರಾಟ ನಡೆಸುತ್ತಿರುವುದಕ್ಕೆ ಬಿಜೆಪಿ ತಕರಾರಿಲ್ಲ: ಬಿವೈ ವಿಜಯೇಂದ್ರ

|

Updated on: Aug 19, 2024 | 3:46 PM

ರಾಜ್ಯಪಾಲರ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯಪಾಲರೇ ಹೊಣೆ ಎಂದು ಹೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ ಆಡಳಿತ ನಡೆಸುತ್ತಿರುವ ಪಕ್ಷದ ನಾಯಕರು ಇಂಥ ಹೇಳಿಕೆ ನೀಡುತ್ತಿರುವುದು ಶೋಚನೀಯ, ರಾಜ್ಯಪಾಲರು ಅದನ್ನು ಗಮನಿಸುತ್ತಾರೆ, ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದರು.

ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೊಕ್ಕಿರುವುದಕ್ಕೆ ನಗರದಲ್ಲಿಂದು ನಮ್ಮ ವರದಿಗಾರನಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಒಬ್ಬ ಸಾಮಾನ್ಯ ನಾಗರಿಕನಿಗೆ ಕಾನೂನಿನ ನೆರವು ಪಡೆಯುವ ಅವಕಾಶವಿರುವ ಹಾಗೆ ಮುಖ್ಯಮಂತ್ರಿಯವರಿಗೂ ಇರುತ್ತದೆ, ಅವರು ತಮ್ಮ ಪರ ವಾದಿಸಲು ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ, ಹಿಂದೆ ತಾವು ಕೂಡ ನ್ಯಾಯಾಲಯದ ಮೊರೆ ಹೊಕ್ಕಿದ್ದೆವು, ಅದರ ಬಗ್ಗೆ ಬಿಜೆಪಿಯ ತಕರಾರೇನೂ ಇಲ್ಲ ಎಂದು ಹೇಳಿದರು. ಆದರೆ, ನಾಲ್ಕೈದು ಸಾವಿರ ಕೋಟಿ ರೂ. ಮೊತ್ತದ ಹಗರಣದ ತನಿಖೆಯನ್ನು ಏಕ ವ್ಯಕ್ತಿಯ ಆಯೋಗ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಲಾಯನ ಮಾಡುವ ಪ್ರಯತ್ನ ಮಾಡಿದ್ದು ಸರಿಯಲ್ಲ, ನ್ಯಾಯಯುತವಾಗಿ ರಾಜೀನಾಮೆ ಸಲ್ಲಿಸಿ ಕಾನೂನು ಹೋರಾಟ ನಡೆಸಲಿ ಎಂದು ವಿಜಯೇಂದ್ರ ಹೇಳಿದರು. ಬಿಜೆಪಿ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿರುವ ದಾಖಲೆಗಳು ಮಾತ್ರ ಆಧಾರವೇ ಎಂದು ಕೇಳಿದ ಪ್ರಶ್ನೆಗೆ ತಡಬಡಿಸಿದ ವಿಜಯೇಂದ್ರ, ನಾವು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದ್ದು ನಿಮಗೆ ಕಾಣಿಸಲಿಲ್ಲವೇ ಎಂದು ಮರು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ ಇಳಿಸಲು ಡಿಕೆ ಶಿವಕುಮಾರ್ ಮಾತಿನಂತೆ ಬಿವೈ ವಿಜಯೇಂದ್ರ ಪಾದಯಾತ್ರೆ: ಯತ್ನಾಳ್ ಹೊಸ ಬಾಂಬ್