ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಟಿ.ನರಸೀಪುರದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರತಿಭಟನೆ ವೇಳೆ ಮೈಸೂರು ನಗರ ಬಿಜೆಪಿ ಘಟಕದಲ್ಲಿನ ಭಿನ್ನಮತ ಸ್ಫೋಟಗೊಂಡಿದೆ. ಪ್ರತಾಪ್ ಸಿಂಹ ಅವರನ್ನು ಬೆಂಬಲಿಸಿ ಕಾರ್ಯಕರ್ತರು ಘೋಷಣೆ ಕೂಗಿದಕ್ಕೆ ಮೈಸೂರು ನಗರಾಧ್ಯಕ್ಷ ಎಲ್. ನಾಗೇಂದ್ರ ಅಸಮಾಧಾನಗೊಂಡು ಪ್ರತಿಭಟನೆಯಿಂದ ಹೊರನಡೆದರು. ಇದು ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಹೈಕಮಾಂಡ್ ಮಧ್ಯಪ್ರವೇಶಿಸದಿದ್ದರೆ ಸಮಸ್ಯೆ ಉಲ್ಬಣಿಸಬಹುದು.
ಮೈಸೂರು, ಸೆಪ್ಟೆಂಬರ್ 14: ಟಿ.ನರಸೀಪುರದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರತಿಭಟನೆಯು ಮೈಸೂರು ನಗರ ಬಿಜೆಪಿ ಘಟಕದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ. ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ನೀಡಿದ ಹೇಳಿಕೆಯನ್ನು ಖಂಡಿಸಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಸಂದರ್ಭದಲ್ಲಿ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ಪ್ರಕಟವಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ, ಕಾರ್ಯಕರ್ತರು ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದಾಗ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್. ನಾಗೇಂದ್ರ ತೀವ್ರ ಅಸಮಾಧಾನಗೊಂಡರು. ಈ ಘಟನೆಯಿಂದ ಸಿಟ್ಟಿಗೆದ್ದ ನಾಗೇಂದ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಸ್ಥಳದಿಂದ ನಿರ್ಗಮಿಸಿದರು.
ಪ್ರತಾಪ್ ಸಿಂಹ ಮತ್ತು ಎಲ್. ನಾಗೇಂದ್ರ ನಡುವಿನ ಈ ಮುಸುಕಿನ ಗುದ್ದಾಟ ಚಾಮರಾಜ ವಿಧಾನಸಭಾ ಕ್ಷೇತ್ರದ ಭವಿಷ್ಯದ ರಾಜಕೀಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗಿದೆ. ಈ ಇಬ್ಬರು ನಾಯಕರ ನಡುವೆ ಸಾರ್ವಜನಿಕವಾಗಿ ಭಿನ್ನಮತ ಸ್ಫೋಟಗೊಂಡಿರುವುದು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷಕ್ಕೆ ನಷ್ಟವನ್ನುಂಟು ಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
