Ramanagara: ಬಿಜೆಪಿಯೇ ಯಡಿಯೂರಪ್ಪರನ್ನು ಮನೇಲಿ ಕೂರಲು ಹೇಳಿದೆ, ಆ ಕೆಲಸ ಅವರು ಮಾಡಲಿ: ಡಿಕೆ ಸುರೇಶ್, ಸಂಸದ
ಸರ್ಕಾರ ಬಿದ್ಹೋಗುತ್ತೆ ಅಂತ ಹೇಳೋದು ಯಡಿಯೂರಪ್ಪನವರ ಹಗಲು ಕನಸು ಎಂದು ಸುರೇಶ್ ಹೇಳಿದರು.
ರಾಮನಗರ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ (KDP Meeting) ಪಾಲ್ಗೊಂಡು ಹೊರಬಂದ ಬಳಿಕ ಸಂಸದ ಡಿಕೆ ಸುರೇಶ್ (DK Suresh) ಟಿವಿ9 ಕನ್ನಡ ವಾಹಿನಿ ವರದಿಗಾರ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಬಿಜೆಪಿ ಸತತವಾಗಿ ಮಾಡುತ್ತಿರುವ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, ನಾಡಿನ ಜನತೆ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ 135 ಕ್ಷೇತ್ರಗಳಲ್ಲಿ ಗೆಲ್ಲಿಸಿದೆ. ಅಧಿಕಾರಕ್ಕೆ ಬಂದ ಬಳಿಕ ಒಂದೊಂದಾಗಿ ಗ್ಯಾರಂಟಿ ಗಳನ್ನು ಜಾರಿಗೊಳಿಸುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಜನ ಅವರಿಗೆ ವಿರೋಧ ಪಕ್ಷವಾಗಿ ಕೆಲಸ ಮಾಡುವ ಜವಾಬ್ದಾರಿ ನೀಡಿದ್ದಾರೆ, ರಚನಾತ್ಮಕ ಟೀಕೆಗಳ ಮೂಲ ಕೆಲಸ ಮಾಡಲಿ ಎಂದು ಸುರೇಶ್ ಹೇಳಿದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನವನ್ನು ಅರ್ಧರ್ಧ ಅವಧಿಗೆ ಹಂಚಿಕೊಂಡಿದ್ದಾರೆ, ಸಿದ್ದರಾಮಯ್ಯನವರ ಅವಧಿ ಮುಗಿದ ಕೂಡಲೇ ಸರ್ಕಾರ ಬಿದ್ಹೋಗುತ್ತೆ ಅಂತ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿರುವುದಕ್ಕೆ ಸುರೇಶ್, ಅದು ಯಡಿಯೂರಪ್ಪನವರ ಹಗಲು ಕನಸು, ಬಿಜೆಪಿಯ ಹಿರಿಯ ನಾಯಕರೇ ಅವರನ್ನು ಮನೆಯಲ್ಲಿ ಕೂರಲು ಹೇಳಿದ್ದಾರೆ ಆ ಕೆಲಸವನ್ನು ಅವರು ಮಾಡಲಿ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ