ಬಿಕೆ ಹರಿಪ್ರಸಾದ್ ಬೆಂಗಳೂರಿನ ಗೂಂಡಾ ಆಗಿದ್ದ, ಅವನು ದೇಶದ ಆಂತರಿಕ ಭಯೋತ್ಪಾದಕ: ಬಸನಗೌಡ ಪಾಟೀಲ ಯತ್ನಾಳ್

ಬಿಕೆ ಹರಿಪ್ರಸಾದ್ ಬೆಂಗಳೂರಿನ ಗೂಂಡಾ ಆಗಿದ್ದ, ಅವನು ದೇಶದ ಆಂತರಿಕ ಭಯೋತ್ಪಾದಕ: ಬಸನಗೌಡ ಪಾಟೀಲ ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 09, 2022 | 4:11 PM

ಕಲಬುರಗಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್ ಅವರು ಹರಿಪ್ರಸಾದ ಒಬ್ಬ ಆಂತರಿಕ ಭಯೋತ್ಪಾದಕ, ಹಿಂದೆ ಅವನು ಬೆಂಗಳೂರಿನ ಗೂಂಡಾ ಆಗಿದ್ದ ಎಂದರು.

Kalaburagi: ಅಜಾನ್ ವಿರುದ್ಧ ಕೆಲವು ಹಿಂದೂ ಸಂಘಟನೆಗಳ ಪ್ರತಿಭಟನೆ ಸೋಮವಾರದಿಂದ ಹೆಚ್ಚಾಗಿದೆ. ರಾಜ್ಯದ ಹಲವಾರು ಭಾಗಗಳ ಹಿಂದೂ ದೇವಸ್ಥಾನಗಳಲ್ಲಿ (Hindu temples) ಸುಪ್ರಭಾತ ಮತ್ತು ಹನಮಾನ್ ಚಾಲಿಸಾ (Hanuman Chalisa) ಧ್ವನಿವರ್ಧಕಗಳ ಮೂಲಕ ಪಠಿಸಲಾಗುತ್ತಿದೆ. ಹಾಗಾಗಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಯಾನ್ ಬಾಜಿ ಶುರುವಾಗಿದೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ (BK Hari Prasad) ಅವರು ಅಜಾನ್ ವಿರುದ್ಧ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು ಅಂತ ಹೇಳಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಪಕ್ಷದ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮ್ಮ ಪಕ್ಷದವರನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ ಇನ್ನು ವಿರೋಧ ಪಕ್ಷದವರನ್ನು ಬಿಟ್ಟಾರೆಯೇ? ಕಲಬುರಗಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್ ಅವರು ಹರಿಪ್ರಸಾದ ಒಬ್ಬ ಆಂತರಿಕ ಭಯೋತ್ಪಾದಕ, ಹಿಂದೆ ಅವನು ಬೆಂಗಳೂರಿನ ಗೂಂಡಾ ಆಗಿದ್ದ ಎಂದರು.

‘ಅಸಲಿಗೆ, ಸಿದ್ದರಾಮಯ್ಯ ಅವರೊಬ್ಬರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಗೂಂಡಾಗಳು, ಸೋನಿಯಾ ಗಾಂಧಿ ಅವರು ಪಕ್ಷವನ್ನು ಗೂಂಡಾಗಳ ಕೈಗೊಪ್ಪಿಸಿ ನಿದ್ರೆ ಮಾಡುತ್ತಿದ್ದಾರೆ’ ಎಂದು ಯತ್ನಾಳ್ ಹೇಳಿದರು. ಗಡುವು ಮುಗಿದರೂ ಮಸೀದಿಗಳ ಮೇಲೆ ಕಟ್ಟಿರುವ ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸುವ ಕಾರ್ಯ ಆಗಿಲ್ಲ ಆದರೆ ಸರ್ಕಾರ ಹನುಮಾನ್ ಚಲೀಸಾ ಪಠಿಸುವವರನ್ನು ಬಂಧಿಸುತ್ತಿದೆ ಎಂದು ಪತ್ರಕರ್ತರು ಯತ್ನಾಳ್ ಗಮನಕ್ಕೆ ತಂದಾಗ, ‘ಅದು ಸರಿಯಲ್ಲ ಸರ್ಕಾರ ತಪ್ಪು ಮಾಡುತ್ತಿದೆ’ ಎಂದು ಹೇಳಿದರು.

ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ ನಿಭಾಯಿಸಲು ಅಗಲ್ಲ, ಮುಖ್ಯಮಂತ್ರಿಗಳು ಅವರಿಗೆ ರೆವೆನ್ಯೂ ಅಥವಾ ಬೇರೆ ಯಾವುದಾದರೂ ಕೊಡಬೇಕು ಮತ್ತು ಗೃಹ ಇಲಾಖೆಯನ್ನು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಛಾತಿಯಿರುವವರಿಗೆ ನೀಡಬೇಕು, ಇದನ್ನು ನಾನು ಹಲವಾರು ಸಲ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಕೆಜಿ ಹಳ್ಳಿ ಘಟನೆಯಿಂದ ಅರಂಭಗೊಂಡು ನಮ್ಮ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವುದು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ ಎಂದರು.

ಕೇಂದ್ರ ಸರ್ಕಾರ ರಾಜ್ಯದ ಸ್ಥಿತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಬೊಮ್ಮಾಯಿ ಅವರು ಮಂಗಳವಾರ ದೆಹಲಿಗೆ ಹೋದಾಗ ವರಿಷ್ಠರು ಸರಿಯಾಗಿ ತಾಕೀತು ಮಾಡಿ ಕಳಿಸಿದರೆ ರಾಜ್ಯದಲ್ಲಿ ಹಿಂದೂಗಳೂ ನೆಮ್ಮದಿಯಿಂದ ಬದುಕುವುದು ಸಾಧ್ಯವಾಗುತ್ತದೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:   ಸಿಎಂ ಕುರ್ಚಿಗೆ 2,500 ಕೋಟಿ ಹಣ ಕೇಳ್ತಾರೆಂಬ ಯತ್ನಾಳ್ ಹೇಳಿಕೆಗೆ ವಿರೋಧ; ಶಾಸಕ ಯತ್ನಾಳ್ ಹೇಳಿಕೆ ಪಕ್ಷಕ್ಕೆ ಮುಜುಗರ ತರುತ್ತಿದೆ ಎಂದ ಸಚಿವ ವಿ.ಸೋಮಣ್ಣ