ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ, ರೇಣುಕಾಸ್ವಾಮಿ ತಂದೆ
ಕಾಶೀನಾಥಯ್ಯ ಕುಟುಂಬಕ್ಕೆ ಸರ್ಕಾರದ ನೆರವು ಅತ್ಯಂತ ಜರೂರಾಗಿ ಬೇಕಿದೆ. ದುಡಿದು ಮನೆ ನಡೆಸುತ್ತಿದ್ದ ಮಗನನ್ನು ಕಳೆದುಕೊಂಡು ಅವರ ಕುಟುಂಬ ಅಕ್ಷರಶಃ ಕಂಗಾಲಾಗಿದೆ. ಅವರ ಸೊಸೆ ಅಂದರೆ ರೇಣುಕಾಸ್ವಾಮಿ ಪತ್ನಿ ಗರ್ಭಿಣಿ. ಖಾಯಂ ನೌಕರಿ ಕೊಡಿಸುವ ವಾಗ್ದಾನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವುದು ಸ್ವಾಗತಾರ್ಹ.
ಚಿತ್ರದುರ್ಗ: ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಅವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ತಮ್ಮ ನೋವನ್ನು ಹೇಳಿಕೊಂಡ ರೇಣುಕಾಸ್ವಾಮಿ (Renukaswamy) ತಂದೆ ಕಾಶೀನಾಥಯ್ಯ ಶಿವನಗೌಡ್ರ (Kashinathaiah Shivangoudra) ತಮ್ಮೂರು ಚಿತ್ರದುರ್ಗಕ್ಕೆ ವಾಪಸ್ಸು ಹೋದ ಬಳಿಕ ಮಾಧ್ಯಮದವರ ಜೊತೆ ಮತಾಡಿದರು. ಮುಖ್ಯಮಂತ್ರಿಯವರು ನಮ್ಮೊಂದಿಗೆ ಬಹಳ ಆತ್ಮೀಯತೆಯಿಂದ ಮಾತಾಡಿ ಸಾಂತ್ವನ ಹೇಳಿದರಲ್ಲದೆ ನಮ್ಮಲ್ಲಿ ಧೈರ್ಯ ತುಂಬಿದರು ಎಂದು ಕಾಶೀನಾಥಯ್ಯ ಹೇಳಿದರು. ಅವರೊಂದಿಗೆ ಮಾತಾಡುವಾಗ ತಮ್ಮ ಸೊಸೆಗೆ ಅನುಕಂಪ ಆಧಾರದಲ್ಲಿ ಒಂದು ಖಾಯಂ ನೌಕರಿಗಾಗಿ ಮನವಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸರಲ್ಲದೆ ಸೊಸೆಯ ವಿದ್ಯಾರ್ಹತೆ ಪ್ರಮಾಣ ಪತ್ರಗಳ ಪ್ರತಿಗಳನ್ನು ಕೂಡಲೇ ತನಗೆ ಕಳಿಸುವಂತೆ ಹೇಳಿದರೆಂದು ಕಾಶೀನಾಥಯ್ಯ ಹೇಳಿದರು. ಬೇರೆ ಏನಾದರೂ ಆಶ್ವಾಸನೆ ನೀಡಿದರೆ ಅಂತ ಪತ್ರಕರ್ತರು ಕೇಳಿದಾಗ ಬೇರೇನೂ ಹೇಳಿಲ್ಲ, ಆದರೆ ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಯುತ್ತದೆ ಮತ್ತು ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ಖಂಡಿತ ಆಗುತ್ತದೆ ಎಂದು ಮಗನನ್ನು ಕಳೆದುಕೊಂಡ ದುಃಖದಿಂದ ಇನ್ನೂ ಚೇತರಿಸಿಕೊಳ್ಳದ ಕಾಶೀನಾಥಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ನಂದೀಶ್ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ: ಸಹೋದರಿ