ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ

| Updated By: Ganapathi Sharma

Updated on: Oct 29, 2024 | 2:53 PM

ಸಾಮಾನ್ಯವಾಗಿ ಪೂಜೆ, ತಿಲಕ ಇಡುವುದು ಇತ್ಯಾದಿಗಳಿಂದ ತುಸು ದೂರ ಉಳಿಯುವ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಗೂ ಮುನ್ನ ವಿಜಯಪುರಕ್ಕೆ ತೆರಳಿದ್ದಾಗ ವಾಗ್ದೇವಿ ದೇವಸ್ಥಾನದ ಒಳ ಪ್ರವೇಶಿಸಲು ನಿರಾಕರಿಸಿ ಸುದ್ದಿಯಾಗಿದ್ದರು. ಅಚ್ಚರಿಯೆಂಬಂತೆ ಇದೀಗ ಹಾಸನದ ಪ್ರಸಿದ್ಧ ಹಾಸನಾಂಬಾ ಸನ್ನಿಧಿಯಲ್ಲಿ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ್ದಾರೆ. ಅರ್ಚಕರು ಹೇಳಿಕೊಟ್ಟಂತೆಯೇ ಪ್ರಾರ್ಥನೆ ಮಾಡಿದ್ದಾರೆ.

ಹಾಸನ, ಅಕ್ಟೋಬರ್ 29: ಹಾಸನದ ಪ್ರಸಿದ್ಧ ಹಾಸನಾಂಬ ದೇಗುಲಕ್ಕೆ ಸೋಮವಾರ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ಇದೇ ವೇಳೆ, ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ಹಾಸನಾಂಬೆ ದೇವಿ ದರ್ಶನ ಪಡೆಯುವಾಗ ಅಷ್ಟೋತ್ತರದಿಂದ ಪೂಜೆ ಮಾಡುವುದು ವಾಡಿಕೆ. ಆದರೆ, ಈ ಬಾರಿ ಸಿದ್ದರಾಮಯ್ಯ ಖಡ್ಗಮಾಲಾ ಸ್ತೋತ್ರದ ಮೂಲಕ ದೇವಿಯನ್ನು ಅರ್ಚಿಸಿದ್ದು ವಿಶೇಷವಾಗಿತ್ತು.

ಖಡ್ಗಮಾಲಾ ಸ್ತೋತ್ರ ಶಕ್ತಿ ದೇವಿಯ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರ ಎನ್ನಲಾಗಿದೆ. ಖಡ್ಗಮಾಲಾ ಸ್ತೋತ್ರವನ್ನು ಪಠಿಸುವುದರಿಂದ ಅತೀಂದ್ರಿಯ ಆಯುಧಗಳ ರಕ್ಷಣಾತ್ಮಕ ಮಾಲೆ ಸಿಗುತ್ತದೆ. ಜೊತೆಗೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಇದು ಮುಕ್ತಿ ನೀಡುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಮುಡಾ ಹಗರಣ ಸೇರಿದಂತೆ ಅನೇಕ ವಿಚಾರಗಳಲ್ಲಿ ತೊಂದರೆ ಎದುರಿಸುತ್ತಿರುವ ಮುಖ್ಯಮಂತ್ರಿಗಳು, ಸಮಸ್ಯೆಯಿಂದ ಪಾರಾಗಲು ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಟಾಚಾರಕ್ಕೆ ವಾಗ್ದೇವಿ ದರ್ಶನ ಮಾಡಿದ ಚುನಾವಣಾ ಹಿಂದೂ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ