ಬಜೆಟ್​​ನಲ್ಲಿ ಮಂಡ್ಯಕ್ಕೆ ಏನು ಕೊಟ್ಟಿದ್ದೀರಿ? ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

| Updated By: ಗಣಪತಿ ಶರ್ಮ

Updated on: Jul 29, 2024 | 12:31 PM

ಕೆಆರ್​​ಎಸ್​​​ಗೆ ಬಾಗಿನ ಅರ್ಪಿಸುವುದಕ್ಕೂ ಮುನ್ನ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಇದೇ ವೇಳೆ, ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿಗೆ ಹಾಗೂ ನಿರ್ಮಲಾ ಸೀತಾರಾಮನ್​ಗೆ ಬಜೆಟ್ ವಿಚಾರವಾಗಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಮಾತಿನ ವಿಡಿಯೋ ಇಲ್ಲಿದೆ.

ಮೈಸೂರು, ಜುಲೈ 29: ಕೇಂದ್ರ ಬಜೆಟ್​​​ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ಎಂಬ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಕೆಆರ್​​ಎಸ್​​​ಗೆ ಬಾಗಿನ ಅರ್ಪಿಸಲು ಮೈಸೂರಿಗೆ ಬಂದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಮಂಡ್ಯಕ್ಕೆ ಬಜೆಟ್​​ನಲ್ಲಿ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಮಂಡ್ಯಕ್ಕೆ ಏನೂ ಕೊಟ್ಟಿಲ್ಲ. ಕೈಗಾರಿಕೆಯನ್ನಾದರೂ ಕೊಟ್ಟರಾ? ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ರಾಯಚೂರಿಗೆ ಏಮ್ಸ್ ಆಸ್ಪತ್ರೆ ಕೇಳಿದ್ದೆವು. ಅದನ್ನೂ ಕೊಟ್ಟಿಲ್ಲ. ಕೇವಲ ಆಂಧ್ರ ಪ್ರದೇಶ, ಬಿಹಾರಕ್ಕೆ ಮಾತ್ರ ಕೊಡುಗೆ ನೀಡಿದ್ದಾರೆ ಎಂದು ಸಿಎಂ ಆರೋಪಿಸಿದರು.

ಇನ್ನು ಮುಡಾ ವಿಚಾರವಾಗಿ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೂ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಕೂಡ ಮುಡಾ ನಿವೇಶನ ಪಡೆದಿದ್ದಾರೆ. ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ. ಹೆಚ್‌ಡಿ ದೇವೇಗೌಡರಿಗೆ ಎಷ್ಟು ಸೈಟ್ ಹೋಗಿದೆ ಗೊತ್ತಿದೆಯಾ? ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟ್ ಬರೆಸಿಕೊಂಡಿದ್ದಾರೆ ಪಟ್ಟಿ ಕೊಡಲಾ? ಅದರ ಸ್ವಾಧೀನ ಪತ್ರವೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಕುಮಾರಸ್ವಾಮಿ ಸುಳ್ಳು ಹೇಳಿದರೆ ಹೇಗೆ‌? ಸ್ವಾಧೀನ ಪತ್ರ ಪಡೆದಿಲ್ಲ ಎಂದು ಹೆಚ್​ಡಿಕೆ ಹೇಳ್ತಿರುವುದು ಸುಳ್ಳು. ಇವರೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.

ಇದನ್ನೂ ಓದಿ: ಸಚಿವ ಸಂಪುಟಕ್ಕೆ ಆಗಲಿದೆಯಾ ಸರ್ಜರಿ? ನಾಳೆ ಸಿಎಂ, ಡಿಸಿಎಂ ದೆಹಲಿ ಪ್ರವಾಸ

ನಿರ್ಮಲಾ ಸೀತಾರಾಮನ್​ಗೂ ತಿರುಗೇಟು


ರಾಜ್ಯದಿಂದ ಕೈಗಾರಿಕೆಗಳು ವಾಪಸ್​ ಹೋಗುತ್ತಿವೆ ಎಂಬ ಹೇಳಿಕೆ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ತಿರುಗೇಟು ನೀಡಿದ ಸಿಎಂ, ಕರ್ನಾಟಕದಿಂದ ಅಲ್ಲ, ದೇಶದಿಂದಲೇ ಕೈಗಾರಿಕೆಗಳು ವಾಪಸ್ ಹೋಗ್ತಿವೆ. ಇಲ್ಲಿ ಕೈಗಾರಿಕೆಗಳು ಎಷ್ಟು ಬೆಳವಣಿಗೆಯಾಗಿದೆಂದು ವಿವರವಾಗಿ ಹೇಳುತ್ತೇವೆ. ಸಚಿವರಾದ ಎಂಬಿ ಪಾಟೀಲ್, ಪ್ರಿಯಾಂಕ್​ ಖರ್ಗೆಗೆ ಪಟ್ಟಿ ಕೊಡುವಂತೆ ಹೇಳುತ್ತೇನೆ‌. ರಾಜ್ಯದಲ್ಲಿ ಯಾವುದೇ ಭಯದ ವಾತಾವರಣ ಇಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on