ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನಷ್ಟೆ, ಸಂಪುಟ ರಚನೆ ಬಗ್ಗೆ ಚರ್ಚಿಸಿಲ್ಲ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Updated on: Nov 15, 2025 | 7:34 PM

ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಖರ್ಗೆ ನಮ್ಮ ನಾಯಕರು, ಪಕ್ಷದ ಅಧ್ಯಕ್ಷರು. ನಾನು ಯಾವಾಗ ಬೇಕಾದರೂ ಭೇಟಿಯಾಗುವೆ. ಸೋಮವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗುವೆ. ಈ ವೇಳೆ ಕಬ್ಬು ಬೆಳೆಗಾರರ ಸಮಸ್ಯೆ, ಬೆಳೆ ಹಾನಿ ಪರಿಹಾರದ ಬಗ್ಗೆ ಚರ್ಚೆ ನಡೆಸುತ್ತೇನೆ. ರಾಜ್ಯಕ್ಕೆ ಪರಿಹಾರ ನೀಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ನವದೆಹಲಿ, ನವೆಂಬರ್ 15: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ದೆಹಲಿ ಭೇಟಿ ಭಾರೀ ಕುತೂಹಲ ಮೂಡಿಸಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ರಾಹುಲ್ ಗಾಂಧಿಯವರ ಜೊತೆ ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ರಾಹುಲ್ ಗಾಂಧಿಯವರ ಭೇಟಿ ವೇಳೆ ಬಿಹಾರದ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಲಾಗಿದೆ. ಫಲಿತಾಂಶದಿಂದ ರಾಹುಲ್ ಗಾಂಧಿ ಬೇಸರಗೊಂಡಿದ್ದರು. ಹೀಗಾಗಿ, ನಾವು ನಿಮ್ಮ ಜೊತೆ ಇದ್ದೇವೆ ಎಂದು ರಾಹುಲ್ ಗಾಂಧಿಗೆ ಧೈರ್ಯ ತುಂಬಿ ಬಂದಿದ್ದೇನೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಮಯ ನಿಗದಿಯಾಗಿದೆ. ನಾನು ಮೋದಿಯವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ