ದರ್ಶನ್ಗೆ ಎಣ್ಣೆ-ಬಾಡೂಟ, ನನ್ನ ಮಗನಿಗೆ ಜೈಲೂಟವಾದರೂ ಸರಿಯಾಗಿ ಸಿಗುತ್ತಿದೆಯಾ ಅಂತ ಗೊತ್ತಿಲ್ಲ: ಆರೋಪಿ ನಂದೀಶ್ ತಂದೆ
ಮಗ ಜೈಲು ಸೇರಿದ ಎರಡೂವರೆ ತಿಂಗಳ ಅವಧಿಯಲ್ಲಿ ಶ್ರೀನಿವಾಸಯ್ಯ ಮತ್ತು ಅವರ ಪತ್ನಿ ಕೇವಲ ಮೂರು ಬಾರಿ ಮಾತ್ರ ನೋಡಲು ಹೋಗಿದ್ದಾರೆ. ಹೋದಾಗೆಲ್ಲ ಮಗನಿಗಾಗಿ ಅವರು ಹಣ್ಣು ತೆಗೆದುಕೊಂಡು ಹೋಗಿರುವರಾದರೂ ಅದನ್ನು ಅವನೇ ತಿಂದನೋ ಬೇರೆಯವರ ಪಾಲಾಯಿತೋ ಅಂತ ಆಳವಾದ ನೋವಿನೊಂದಿಗೆ ಹೇಳುತ್ತಾರೆ.
ಮಂಡ್ಯ: ಉಳ್ಳವರದ್ದೇ ಕಾಲ ಅಂತಾರಲ್ಲ ಅದು ನಿಜ ಸ್ವಾಮಿ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 2 ಆಗಿ ಜೈಲು ಸೇರಿರುವ ಚಿತ್ರನಟ ದರ್ಶನ್ ಜೈಲಲ್ಲಿರುವ ಕೆಲ ಕುಖ್ಯಾತ ರೌಡಿಗಳೊಂದಿಗೆ ಕಾಫಿ ಹೀರುತ್ತ, ಸಿಗರೇಟು ಸೇದುತ್ತ, ಎಣ್ಣೆ ಹೊಡೆಯುತ್ತ ಮಜವಾಗಿ ಕಾಲ ಕಳೆಯುತ್ತಿದ್ದರೆ, ಅದೇ ಪ್ರಕರಣದಲ್ಲಿ ಅರೋಪಿ ನಂಬರ್ 5 ಅಗಿ ಅದೇ ಜೈಲಲ್ಲಿರುವ ನಂದೀಶನಿಗೆ ಜೈಲೂಟ ಸಹ ಸರಿಯಾಗಿ ಸಿಗುತ್ತದೆಯೋ ಇಲ್ಲವೋ ಅಂತ ಅವರ ವಯಸ್ಸಾದ ತಂದೆ ಕೊರಗುತ್ತಿದ್ದಾರೆ. ಹತ್ಯೆಯಲ್ಲಿ ನಂದೀಶನ ಪಾತ್ರ ಏನು ಅಂತ ಯಾರಿಗೂ ಗೊತ್ತಿಲ್ಲ, ಕುರುಡು ಅಭಿಮಾನಕ್ಕೆ ಜೋತು ಬಿದ್ದು ‘ದರ್ಶನ್ ಅಣ್ಣ’ ಕರೆದ ಅಂತ ಅವರ ಜೊತೆ ಹೋಗಿ ಜೈಲು ಸೇರಿದ 15 ಜನರಲ್ಲಿ ನಂದೀಶ ಕೂಡ ಒಬ್ಬರು. ಅವರ ತಂದೆ ಶ್ರೀನಿವಾಸಯ್ಯ ಒಂದು ಗೂಡಂಗಡಿ ನಡೆಸುತ್ತಾರೆ ಮತ್ತು ತಾಯಿ ಕೂಲಿ ನಾಲಿ ಮಾಡುತ್ತಾರೆ. ಮಗನನ್ನು ನೋಡಲು ಅವರು ದುಡ್ಡು ಹೊಂದಿಸಿಕೊಂಡು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಶ್ರೀನಿವಾಸಯ್ಯನವರ ಬಳಿ ಮಗನಿಗಾಗಿ ಒಬ್ಬ ವಕೀಲನನ್ನು ನೇಮಿಸಿಕೊಳ್ಳುವಷ್ಟು ಹಣವಿಲ್ಲ. ಕರೆದೊಯ್ದವರು ಕರೆತರುತ್ತಾರೆ ಎಂಬ ದೂರದ ನಿರೀಕ್ಷೆಯೊಂದಿಗೆ ಇವರು ಬದುಕು ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ಗಾರ್ಡನ್ ನಾಗನ ಬಳಿ; ಕಾರಣವೇನು?