ಸಿಎಂ ಸಿದ್ದರಾಮಯ್ಯ ಹೇಳಿದ್ರೂ ಕೇಳಿಲ್ವಂತೆ ಹೈಕಮಾಂಡ್! ಸಚಿವ ಸ್ಥಾನದಿಂದ ವಜಾಗೊಂಡ ರಹಸ್ಯ ಬಿಚ್ಚಿಟ್ಟ ಕೆಎನ್ ರಾಜಣ್ಣ
ಷಡ್ಯಂತ್ರ ಮಾಡಿ ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದರು. ಅದೇ ಆಟ ನನಗೂ ಬರುತ್ತೆ ಎಂದು ಕಾಂಗ್ರೆಸ್ ನಾಯಕ ಕೆಎನ್ ರಾಜಣ್ಣ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ತಮ್ಮ ಪರವಾಗಿ ಹೈಕಮಾಂಡ್ ಮನವೊಲಿಸಲು ಯತ್ನಿಸಿದ್ದರು. ಆದರೆ, ಅದು ಫಲಗೊಡಲಿಲ್ಲ ಎಂಬುದನ್ನೂ ರಾಜಣ್ಣ ಬಹಿರಂಗಪಡಿಸಿದ್ದಾರೆ. ರಾಜಣ್ಣ ಮಾತಿನ ವಿಡಿಯೋ ಇಲ್ಲಿದೆ.
ಬೆಂಗಳೂರು, ಆಗಸ್ಟ್ 15: ‘ಪಾಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಹೈಕಮಾಂಡ್ ನಾಯಕರ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ಅವರ ಮಾತನ್ನು ಹೈಕಮಾಂಡ್ನವರು ಕೇಳಲೇ ಇಲ್ಲ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿದೆ’ ಎಂದು ಕಾಂಗ್ರೆಸ್ ನಾಯಕ ಕೆಎನ್ ರಾಜಣ್ಣ ತಮ್ಮ ರಾಜೀನಾಮೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಅಸಹಾಯಕರಾದ ಸಿದ್ದರಾಮಯ್ಯ!
‘ಅವರು (ಸಿದ್ದರಾಮಯ್ಯ) ಮನೆಯಿಂದ ವಿಧಾನಸೌಧಕ್ಕೆ ಬರುವ ಹೊತ್ತಿಗೆ ನೀವು ಮಾಧ್ಯಮದವರೇ ತೋರಿಸಿರುವಂತೆ ಕಾರಲ್ಲಿ ಬಾಗಿಲು ಹಾಕೊಂಡು ಮಾತನಾಡುತ್ತಾ ಇದ್ದರಲ್ಲವೇ. ಅದು ಅದೇ ವಿಷಯ (ರಾಜೀನಾಮೆ). ಕಾರಲ್ಲಿ ಬಾಗಿಲು ಹಾಕೊಂಡು ಸುಮಾರು 20 ನಿಮಿಷ ಮಾತನಾಡಿದ್ದಾರೆ. ಪಾಪ ಅವರು ಹೈಕಮಾಂಡ್ ಅನ್ನು ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಹೈಕಮಾಂಡ್ ಒಪ್ಪಲೇ ಇಲ್ಲ. ಈ ಬಗ್ಗೆ ನನಗೆ ಅವರು ತಿಳಿಸಿದರು. ವಿಧಿ ಇಲ್ಲ ಎಂದರು. ಆಯ್ತು ಸರ್ ಎಂದೆ’ ಎಂದು ರಾಜಣ್ಣ ಹೇಳಿದರು.