ಈ ಜಾತ್ರೆಯಲ್ಲಿ ಭಕ್ತರು ಮುಳ್ಳು ಗದ್ದುಗೆಯ ಮೇಲೆ ನಡೆದು ಕುಣಿಯುತ್ತಾರೆ ಮತ್ತು ಕುಪ್ಪಳಿಸುತ್ತಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 14, 2022 | 4:25 PM

ಮುಳ್ಳಿನರಾಶಿಯ ಮೇಲೆ ಎಲ್ಲರಿಗಿಂತ ಮುಂದೆ ಗಣಮಗ ಇರುತ್ತಾರೆ. ಅವರ ನೇತೃತ್ವದಲ್ಲಿ ಈ ವಿಧಿ ನಡೆಯುತ್ತದೆ. ಆಮೇಲೆ ಗಣಮಗ ಗದ್ದುಗೆ ಮೇಲಿಂದ ನೆಲಕ್ಕೆ ಜಿಗಿಯುತ್ತಾರೆ.

ದಾವಣಗೆರೆ: ಬೇಸಿಗೆ ಬಂತು ಅಂತಾದ್ರೆ ಜಾತ್ರೆಗಳ ಸೀಸನ್ (season of fairs) ಶುರುವಾಯಿತು ಅಂತಲೇ ಅರ್ಥ. ನಮ್ಮ ರಾಜ್ಯದ ಎಲ್ಲ ನಗರದ ಪ್ರದೇಶ, ಜಿಲ್ಲಾ ಮತ್ತು ಕೇಂದ್ರಗಳು, ಹೋಬಳಿ ಹಾಗೂ ಸಣ್ಣಪುಟ್ಟ ಗ್ರಾಮಗಳಲ್ಲೂ ಪ್ರತಿವರ್ಷ ಜಾತ್ರೆ, ಉತ್ಸವ ಮತ್ತು ರಥೋತ್ಸವ ನಡೆಯುತ್ತವೆ. ಪ್ರತಿ ಊರಿನಲ್ಲಿ ನಡೆಯುವ ಜಾತ್ರೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ ಮಾರಾಯ್ರೇ. ಓಕೆ ನಾವಿಲ್ಲಿ ದಾವಣೆಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ (Kulagatte) ಗ್ರಾಮದಲ್ಲಿ ನಡೆಯುವ ಆಂಜನೇಯ (Anjaneya) ಮುಳ್ಳಿನ ಗದ್ದುಗೆ ಉತ್ಸವವನ್ನು ನಿಮಗೆ ತೋರಿಸುತ್ತಿದ್ದೇವೆ. ಈ ಜಾತ್ರೆಯ ವೈಶಿಷ್ಟ್ಯತೆಯೆಂದರೆ, ಭಕ್ತರು ಮುಳ್ಳುರಾಶಿ ಗದ್ದುಗೆ ಮೇಲೆ ನಡೆಯುತ್ತಾ ಕುಣಿದು ಕುಪ್ಪಳಿಸುವುದು.

ಆಂಜನೇಯ ದೇವರ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಲಿ ಎಂದು ಭಕ್ತರು ಹೀಗೆ ಮಾಡುತ್ತಾರೆ. ಭಕ್ತರು ನಡೆಯುತ್ತಿರುವ ಮುಳ್ಳಿನ ಗದ್ದುಗೆ ಸ್ವಾಬಾವಿಕವಾದುದಲ್ಲ. ಕುಳಗಟ್ಟೆ ಗ್ರಾಮದ ಜನ ಕವಳಿ ಮುಳ್ಳನ್ನು ಕಡಿದು ತಂದು ಅಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸುಮಾರು 15 ಅಡಿ ಎತ್ತರ ಹಾಗೂ ಸುಮಾರು 20 ಅಡಿ ಅಗಲ ಮತ್ತು 30 ಅಡಿ ಉದ್ದದ ಗದ್ದುಗೆಯನ್ನು ನಿರ್ಮಿಸುತ್ತಾರೆ.

ಮುಳ್ಳಿನರಾಶಿಯ ಮೇಲೆ ಎಲ್ಲರಿಗಿಂತ ಮುಂದೆ ಗಣಮಗ ಇರುತ್ತಾರೆ. ಅವರ ನೇತೃತ್ವದಲ್ಲಿ ಈ ವಿಧಿ ನಡೆಯುತ್ತದೆ. ಆಮೇಲೆ ಗಣಮಗ ಗದ್ದುಗೆ ಮೇಲಿಂದ ನೆಲಕ್ಕೆ ಜಿಗಿಯುತ್ತಾರೆ. ವಿಡಿಯೋನಲ್ಲಿ ನೀವದನ್ನು ನೋಡಬಹುದು. ನಂತರ ಭಕ್ತರು ಅವರನ್ನು ಎತ್ತಿಕೊಂಡು ಹೋದ ಮೇಲೆ ಭಕ್ತರ ಸಮ್ಮುಖದಲ್ಲಿ ಭೂತ ಗಣಾಧೀಶರಿಗೆ ಬೆಲ್ಲ, ಹಾಲು ಮತ್ತು ಅನ್ನಸೇವನೆ ನಡೆಯುತ್ತದೆ.

ಭಕ್ತರು ಮುಳ್ಳಿನ ಗದ್ದುಗೆ ಮೇಲೆ ನಡೆಯುವಾಗ ನಿಜಕ್ಕೂ ಮೈ ಜುಮ್ಮೆನ್ನುತ್ತದೆ ಮಾರಾಯ್ರೇ. ಸುಮಾರು 50-60 ಭಕ್ತರು ಮುಳ್ಳಿನ ಮೇಲೆ ನಡೆಯುತ್ತಿರುವುದು ಕಾಣುತ್ತದೆ. ಈ ಗ್ರಾಮದಲ್ಲಿ ಪ್ರತಿವರ್ಷ ರಾಮನವಮಿಯ ನಂತರ ರಾಮನ ಪರಮ ಭಕ್ತ ಅಂಜನೇಯನ ರಥೋತ್ಸವ ನಡೆಯುತ್ತದೆ. ರಥೋತ್ಸವದ ಬಳಿಕ ಮುಳ್ಳುಗದ್ದುಗೆ ಉತ್ಸವ ನಡೆಯುತ್ತದೆ.

ಇದನ್ನೂ ಓದಿ:   Viral News: ಬೆನ್ನಿನ ಕೆಳಗೆ ಉದ್ದನೆಯ ಬಾಲವಿರುವ ಯುವಕನ ವಿಡಿಯೋ ವೈರಲ್; ಹನುಮಂತನ ಪುನರ್ಜನ್ಮವೆಂದ ಜನರು!

Published on: Apr 14, 2022 04:23 PM