AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಮೂವರು ಪೊಲೀಸ್​ ಸಿಬ್ಬಂದಿಗೆ ಬಿಗ್​​ ಶಾಕ್​​

ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಮೂವರು ಪೊಲೀಸ್​ ಸಿಬ್ಬಂದಿಗೆ ಬಿಗ್​​ ಶಾಕ್​​

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Apr 29, 2026 | 3:24 PM

Share

ಪೊಲೀಸರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿತ್ತು. ಗಾಂಜಾ ಸೇವನೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ ಸಹ ಪೊಲೀಸರು ಆದಿತ್ಯನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಪೇದೆಗಳಾದ ಚಂದ್ರು ನಡುವಿನಮನಿ, ಕಿರಣ್ ಡೊಕ್ಕಣ್ಣನವರ್, ಸಯದ್ ತಹಸಿಲ್ದಾರ್ ಅವರನ್ನು ಅಮಾನತು ಮಾಡಲಾಗಿದೆ.

ಧಾರವಾಡ, ಏಪ್ರಿಲ್​​ 29: ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಪೇದೆಗಳನ್ನು ಸಸ್ಪೆಂಡ್​​ ಮಾಡಲಾಗಿದೆ. ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ, ಕಿರಣ್ ಡೊಕ್ಕಣ್ಣನವರ್ ಮತ್ತು ಸಯದ್ ತಹಸಿಲ್ದಾರ್ ಅಮಾನತುಗೊಂಡಿರುವ ಅಧಿಕಾರಿಗಳು. ಗಾಂಜಾ ಸೇವನೆ ಆರೋಪದಡಿ ವಿದ್ಯಾರ್ಥಿ ಆದಿತ್ಯನನ್ನು ವಶಕ್ಕೆ ಪಡೆಯಲಾಗಿತ್ತು. ಪರೀಕ್ಷೆಯಲ್ಲಿ ಗಾಂಜಾ ಸೇವನೆ ನೆಗೆಟಿವ್ ಬಂದಿದ್ದರೂ, ಪೊಲೀಸರು ಆದಿತ್ಯನಿಂದ 2000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಾಯಿಯಿಂದ ಹಣ ಕೊಡಿಸಲು ಆದಿತ್ಯ ಯತ್ನಿಸಿದ್ದು, ತಾಯಿ ನಿರಾಕರಿಸಿದ ಕಾರಣ ನೇಣಿಗೆ ಶರಣಾಗಿದ್ದ ಎನ್ನಲಾಗಿತ್ತು.

ಪೊಲೀಸ್ ಆಯುಕ್ತರಿಗೆ ಪ್ರಹ್ಲಾದ್ ಜೋಶಿ ಕರೆ

ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೂರವಾಣಿ ಕರೆ ಮಾಡಿದ್ದಾರೆ. ಪ್ರಕರಣದ ನ್ಯಾಯಯುತ ತನಿಖೆ ನಡೆಸುವಂತೆ ಹಾಗೂ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥ ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ಪ್ರಕರಣದ ನೈತಿಕ ಹೊಣೆ ಹೊರಬೇಕು ಮತ್ತು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಡಿಸಿಪಿ ಶೃತಿ ನೇತೃತ್ವದಲ್ಲಿ ತನಿಖೆ

ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಸಂಬಂಧ ಹಿರಿಯ ಅಧಿಕಾರಿಗಳ ವರದಿ ಆಧಾರದಲ್ಲಿ ಮೂವರು ಪೊಲೀಸ್​​ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಡಿಸಿಪಿ ಶೃತಿ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸಿಬ್ಬಂದಿ ಹಣ‌ ಕೇಳಿದ್ದರ ಬಗ್ಗೆಯೂ ತನಿಖೆಯಾಗಲಿದೆ. ಅಲ್ಲದೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More