ಪೆರ್ಣಂಕಿಲ ಮಹಾ ಗಣಪತಿ ದೇವಸ್ಥಾನಕ್ಕೆ ಆ ಹೆಸರು ಯಾಕೆ ಬಂತು ಅಂತ ನಿಮಗೆ ಗೊತ್ತಾ?

ಪೆರ್ಣಂಕಿಲ ಮಹಾ ಗಣಪತಿ ದೇವಸ್ಥಾನಕ್ಕೆ ಆ ಹೆಸರು ಯಾಕೆ ಬಂತು ಅಂತ ನಿಮಗೆ ಗೊತ್ತಾ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 01, 2021 | 8:23 PM

ಮಹಾಗಣಪತಿಯ ಆಶೀರ್ವಾದದಿಂದ ದಲಿತ ರೈತ ಪೆರ್ಣನ ಹೆಸರು ಶಾಶ್ವತವಾಗಿ ಉಳಿಯುಂತಾಗಲು, ಈ ಊರಿಗೂ ಪೆರ್ಣಂಕಿಲ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಜನರಲ್ಲಿದೆ.

ಪೆರ್ಣಂಕಿಲ ಮಹಾ ಗಣಪತಿ ದೇವಸ್ಥಾನ ಮತ್ತು ಅದಕ್ಕೆ ಹೊಂದಿಕೊಂಡಿರುವ ಶಿವಾಲಯ ರಾಜ್ಯದ ಬಹಳ ಪ್ರಸಿದ್ಧಿ ಹೊಂದಿರುವ ದೇವಸ್ಥಾನಗಳಲ್ಲಿ ಎಣಿಕೆಯಾಗುತ್ತವೆ. ಇಲ್ಲಿರುವ ಗಣೇಶ ಉದ್ಭವ ಮೂರ್ತಿ. ಈಶ್ವರನ ದೇವಸ್ಥಾನಕ್ಕೆ 2,000 ವರ್ಷಗಳ ಇತಿಹಾಸವಿದ್ದರೆ, ಗಣಪತಿಯ ಗುಡಿ ಸುಮಾರು 1,600 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತಿದೆ. ಗಣೇಶನ ದೇಗುಲ ಇಲ್ಲಿ ನಿರ್ಮಣಗೊಳ್ಳುವ ಹಿಂದೆ ಒಂದು ಕತೆಯಿದೆ. ಈ ಕತೆ ಪ್ರಾಯಶಃ ಬಹಳಷ್ಟು ಜನರಿಗೆ ಗೊತ್ತಿರಲಾರದು.

ಈ ಮಂದಿರದಲ್ಲಿರುವ ಗಣೇಶನ ವಿಗ್ರಹ ಅಸಲಿಗೆ ಒಬ್ಬ ದಲಿತ ರೈತನಿಗೆ ಸಿಕ್ಕಿದ್ದು. ಅವನ ಹೆಸರು ಪೆರ್ಣ. ಅದೊಂದು ದಿನ ಅವನು ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲಿಗೆ ಇದ್ದಕ್ಕಿದ್ದಂತೆ ಏನೋ ತಾಕಿದಂತಾಗಿ ಅವನು ಬಗ್ಗಿ ನೋಡಿದಾಗ ಜಮೀನಿನಲ್ಲಿ ಹುದುಗಿದ್ದ ಗಣಪತಿಯ ವಿಗ್ರಹ ಅವನಿಗೆ ಕಾಣಿಸುತ್ತದೆ. ನೇಗಿಲು ವಿಗ್ರಹದ ತಲೆ ಭಾಗಕ್ಕೆ ತಾಕಿದ್ದರಿಂದ ಅದರಿಂದ ರಕ್ತ ಚಿಮ್ಮುತ್ತಿರುವುದು ಅವನಿಗೆ ಸಹ ಅವನಿಗೆ ಕಾಣಿಸುತ್ತದೆ. ಅದನ್ನು ಕಂಡು ಭಯಗ್ರಸ್ತನಾಗುವ ಅವನು ಕೆಲಸ ನಿಲ್ಲಿಸಿ ಮನೆಗೆ ಹೋಗುತ್ತಾನೆ.

ರಾತ್ರಿಯ ಸಮಯ ಪೆರ್ಣ ಮಲಗಿ ನಿದ್ರಿಸುತ್ತಿದ್ದಾಗ ವಿಚಿತ್ರವಾದ ಕನಸು ಕಾಣುತ್ತಾನೆ. ಕನಸಿನಲ್ಲಿ ಅವನಿಗೆ ಎರಡು ಕೊಪ್ಪರಿಗೆಗಳನ್ನು ತೆಗೆದುಕೊಂಡು ಅವನು ಕಂಡ ಗಣಪತಿಯ ವಿಗ್ರಹದ ಮೇಲೆ ಮತ್ತೊಂದನ್ನು ಶಿವಾಲಯದಲ್ಲಿ ಬೋರಲು ಹಾಕುವಂತೆ ಅವನಿಗೆ ದೈವಾಜ್ಞೆಯಾಗುತ್ತದೆ. ರಾತ್ರಿ ಹಾಗೆ ಮಾಡಿ ಮರುದಿನ ಎರಡು ಸ್ಥಳಗಳಿಗೆ ಭೇಟಿ ನೀಡುವಂತೆ ಅವನಿಗೆ ಆಜ್ಞೆಯಾಗುತ್ತದೆ. ಪೆರ್ಣ ತನಗೆ ಹೇಳಿದಂತೆ ರಾತ್ರಿ ಮಾಡಿ ಬೆಳಗ್ಗೆ ಪುನಃ ಅಲ್ಲಿಗೆ ಹೋಗುತ್ತಾನೆ.

ಗಣಪತಿಯ ವಿಗ್ರಹವಿದ್ದ ಜಾಗದಲ್ಲಿ ಬರಿದಾಗಿದ್ದನ್ನು ಕಂಡು ಪೆರ್ಣ ಗಾಬರಿಯಾಗುತ್ತಾನೆ. ಆದರೆ ಅವನು ಬೋರಲು ಹಾಕಿದ್ದ ಕೊಪ್ಪರಿಗೆಯಲ್ಲಿ ವಿಗ್ರಹವು ಈಶ್ವರನ ದೇಗುಲದ ಬಳಿ ಅವನಿಗೆ ಕಾಣಿಸುತ್ತದೆ.

ಸ್ವಲ್ಪ ಸಮಯದ ಬಳಿಕ ಅದೇ ವಿಗ್ರಹ ಹತ್ತಿರದಲ್ಲೇ ಇದ್ದ ಬಾವಿಯ ಬಳಿ ಕಾಣಿಸುತ್ತದೆ ಮತ್ತು ವಿಗ್ರಹದ ಮೇಲ್ಭಾಗ ಮಾತ್ರ ಗೋಚರಿಸುತ್ತಿರುತ್ತದೆ. ಆಗಿನಿಂದ ಈ ದೇವಸ್ಥಾನಕ್ಕೆ ಪೆರ್ಣಂಕಿಲ (ಪೆರ್ಣ+ಅಂಕಿಲ, ಅಂಕಿಲವೆಂದರೆ ನೇಗಿಲು) ದೇಗುಲ ಅಂತ ಹೆಸರು ಬಂತು ಎಂದು ಹೇಳುತ್ತಾರೆ.

ಮಹಾಗಣಪತಿಯ ಆಶೀರ್ವಾದದಿಂದ ದಲಿತ ರೈತ ಪೆರ್ಣನ ಹೆಸರು ಶಾಶ್ವತವಾಗಿ ಉಳಿಯುಂತಾಗಲು, ಈ ಊರಿಗೂ ಪೆರ್ಣಂಕಿಲ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಜನರಲ್ಲಿದೆ.

ಪೆರ್ಣಂಕಿಲ ಮಹಾ ಗಣಪತಿ ದೇವಸ್ಥಾನವು ಉಡುಪಿ ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೆ ಒಳಪಟ್ಟಿದ್ದು, ಶ್ರೀ ವಿಶ್ವೇಶ್ವ ತೀರ್ಥ ಶ್ರೀಪಾದರ ದಿವ್ಯ ಮಾರ್ಗದರ್ಶನದಲ್ಲಿ ನಿರ್ವಹಿಸಲ್ಪಡುತ್ತಿದೆ. ಪ್ರತಿ ವರ್ಷ ಗಣೇಶ ಚತುರ್ಥಿ ಮತ್ತು ಮೀನ ಮಾಸದಲ್ಲಿ ರಥೋತ್ಸವ ನಡೆಯುತ್ತದೆ ಮತ್ತು ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಉಡುಪಿ ಪೇಜಾವರ ಮಠದ ವತಿಯಿಂದ ಇಲ್ಲಿ ಪ್ರತಿದಿನ ಭಕ್ತರಿಗೆ ಅನ್ನ ಸಂತರ್ಪಣೆಯೂ ನಡೆಯುತ್ತದೆ.

ಇದನ್ನೂ ಓದಿ:  ಉಡುಪಿ ಕೃಷ್ಣಮಠದಲ್ಲಿ ಗೊಡ್ಡ ಮೊಗೇರ ಸಮುದಾಯದ ಕೌಶಲ ಪ್ರದರ್ಶನಕ್ಕೆ ಅವಕಾಶ; ನಶಿಸುತ್ತಿರುವ ಕಲೆಯ ಉಳಿವಿಗೆ ಆದ್ಯತೆ