ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್: ‘ಮಾಧ್ಯಮಗಳ ಮುಂದೆ ಪೋಸ್ ನೀಡಿದರೆ ಗ್ರಹಚಾರ ಬಿಡಿಸ್ತೇನೆ’ ಎಂದು ಬೆದರಿಕೆ
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಅವರು ರಸ್ತೆ ಒತ್ತುವರಿ ಕುರಿತು ದೂರು ನೀಡಲು ಬಂದ ಸಾರ್ವಜನಿಕರ ಮೇಲೆ ಆವಾಜ್ ಹಾಕಿದ ಘಟನೆ ನಡೆದಿದೆ. ಸಮಸ್ಯೆ ಬಗ್ಗೆ ಮಾತನಾಡಿದ ಜನರನ್ನು ಬೆದರಿಸಿ, "ಇಡಿಯಟ್ಸ್" ಎಂದು ಜರಿದಿದ್ದು, ಸಾರ್ವಜನಿಕರ ಧ್ವನಿಯನ್ನು ಅಡಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರು, ಸೆ.24: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗೆಜ್ಜೆಗದಹಳ್ಳಿಯಲ್ಲಿ ನಡೆದ ರಸ್ತೆ ಒತ್ತುವರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಸಾರ್ವಜನಿಕರ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಅವರು ಆವಾಜ್ ಹಾಕಿದ್ದಾರೆ. ನ್ಯಾಯ ಕೇಳಲು ಬಂದ ಜನರನ್ನು ಬೆದರಿಸಿ, ನಿಂದಿಸಿದ ಆರೋಪ ಇವರ ಮೇಲಿದೆ. ಘಟನೆಯ ವಿಡಿಯೋದಲ್ಲಿ, ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಅವರು ಸಾರ್ವಜನಿಕರೊಂದಿಗೆ ಮಾತನಾಡುವಾಗ “ಸುಮ್ನೆ ಇರಿ” ಎಂದು ತಾಕೀತು ಮಾಡಿದ್ದಾರೆ. ಮಾಧ್ಯಮದವರ ಮುಂದೆ ಪೋಸ್ ನೀಡಿದರೆ “ಗ್ರಹಚಾರ ಬಿಡಿಸುತ್ತೇನೆ” ಎಂದು ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಸಾರ್ವಜನಿಕರನ್ನು “ಇಡಿಯಟ್ಸ್” ಎಂದು ಜರಿದು, ಅವರ ವರ್ಷಗಳ ಸಮಸ್ಯೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ರಸ್ತೆ ಮತ್ತು ಚರಂಡಿ ಒತ್ತುವರಿ ಸಮಸ್ಯೆಯಿಂದ ವರ್ಷಗಳಿಂದ ಬಳಲುತ್ತಿರುವ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಾಗ, ಇನ್ಸ್‌ಪೆಕ್ಟರ್ “ನಾನು ಮಾಡ್ಸತಾ ಇಲ್ವಾ ಇಲ್ಲಿ?” ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕರು ಮಾತನಾಡುವುದನ್ನು ತಡೆಯಲು “ಮಾತಾಡಬೇಡ” ಎಂದು ಪುನರಾವೃತ್ತಿ ಮಾಡಿರುವುದು ಕಂಡುಬಂದಿದೆ. ಅವರ ಈ ವರ್ತನೆಯಿಂದ ಸಾರ್ವಜನಿಕರ ಧ್ವನಿಯನ್ನು ಅಡಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

