ಊರಹಬ್ಬ ಪ್ರಯುಕ್ತ ನಡೆದ ಕಬಾಬ್ ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಕೋರ್ಟ್ಗೆ ಅಲೆದಾಡಿ ಜೀರ್ಣಿಸಿಕೊಳ್ಳುವ ಸ್ಥಿತಿ ಎದುರಾಗಿದೆ!
ಮುಕ್ಕಲನಾಯ್ಕನಪಟ್ಟಿ ಊರಹಬ್ಬದಲ್ಲಿ ಕಬಾಬ್ ತಿಂದವರಿಗೆ ಅದನ್ನು ಜೀರ್ಣಿಸಿಕೊಳ್ಳುವ ವ್ಯವಸ್ಥೆಯನ್ನು ಅಲ್ಲಿಯ ಪೊಲೀಸರು ಮಾಡಿದ್ದಾರೆ. ಕಬಾಬ್ ಸ್ಪರ್ಧೆ ಆಯೋಜಿಸಿದವರು ಮತ್ತು ತಿಂದವರ ವಿರುದ್ದ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಒಬ್ಬ ಮಾಂಸಾಹಾರಿ (non-vegetarian) ವ್ಯಕ್ತಿ ಅಬ್ಬಬ್ಬಾ ಅಂದರೆ ಎಷ್ಟು ಕಬಾಬ್ ತುಂಡುಗಳನ್ನು ತಿನ್ನಬಹುದು? ಓಕೆ ತೂಕದ ಲೆಕ್ಕದಲ್ಲಿ ಮಾತಾಡುವ. ಎಷ್ಟು ಗ್ರಾಂ ಚಿಕನ್ ಕಬಾಬ್ (Chicken Kabab) ತಿನ್ನಬಹುದು ಅಂತ ಭಾವಿಸುತ್ತೀರಾ? 100-150 ಗ್ರಾಂ ತಿಂದರೆ ಹೆಚ್ಚು ಮಾರಾಯ್ರೇ. ಇನ್ನು ನಾನ್ ವೆಜ್ ಅಥವಾ ಕಬಾಬನ್ನು ಮನಸಾರೆ ಇಷ್ಟಪಡುವವರು ಕಾಲು ಕೆಜಿ (ಕೋಳಿ ಕಾಲಲ್ಲ! 250 ಗ್ರಾಂ) ತಿಂದಾರು. ಹೌದು ತಾನೆ? ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುಕ್ಕಲನಾಯ್ಕನಪಟ್ಟಿ (Mukkalnaykanpatti) ಹೆಸರಿನ ಗ್ರಾಮದಲ್ಲಿ ಊರಹಬ್ಬ ನಡೆಯುವಾಗ ಚಿಕನ್ ಕಬಾಬ್ ತಿನ್ನುವ ಸ್ಫರ್ಧೆ ಏರ್ಪಡಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ಕೆಜಿ ಚಿಕನ್ ಕಬಾಬ್ ತಿನ್ನಬೇಕು. ಯಾರು ಒಂದು ಪೀಸನ್ನೂ ಉಳಿಸದೆ ತಿಂದು ಮುಗಿಸುತ್ತಾರೋ ಅವರು ಕಬಾಬ್ ಚಾಂಪಿಯನ್!!
ನಮ್ಮಲ್ಲಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸುವ ಹಾಗೆಯೇ ಕಬಾಬ್ ತಿನ್ನುವ ಕಾಂಪಿಟೀಶನ್ ಮಾರಾಯ್ರೇ. ಕಬಾಬ್ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಒಂದಷ್ಟು ಈರುಳ್ಳಿ ಮತ್ತು ನೀರು ಕೊಡಲಾಗುತ್ತದೆ. ಊರಹಬ್ಬ, ಜಾತ್ರೆ ಆಯೋಜಿಸುವಾಗ ಬಗೆಬಗೆಯ ಸ್ಪರ್ಧೆಗಳನ್ನು ನಡೆಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಜಾತ್ರೆ ನಡೆಯುವಾಗ ಭಾರ ಎತ್ತುವ, ಕುಸ್ತಿ, ಕೈಕುಸ್ತಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ.
ಸರಿ, ಮುಕ್ಕಲನಾಯ್ಕನಪಟ್ಟಿ ಊರಹಬ್ಬದಲ್ಲಿ ಕಬಾಬ್ ತಿಂದವರಿಗೆ ಅದನ್ನು ಜೀರ್ಣಿಸಿಕೊಳ್ಳುವ ವ್ಯವಸ್ಥೆಯನ್ನು ಅಲ್ಲಿಯ ಪೊಲೀಸರು ಮಾಡಿದ್ದಾರೆ. ಕಬಾಬ್ ಸ್ಪರ್ಧೆ ಆಯೋಜಿಸಿದವರು ಮತ್ತು ತಿಂದವರ ವಿರುದ್ದ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಕಬಾಬ್ ತಿಂದವರಿಗೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವ ಭಯವಿಲ್ಲ. ಕೋರ್ಟಿಗೆ ಅಲೆದಾಡುವುದರಲ್ಲಿ ಅದು ಕರಗಿಬಿಡುತ್ತದೆ!
ಇದನ್ನೂ ಓದಿ: ದುಬೈ ಎಕ್ಸ್ಪೋ 2020ರ ಜಾಹೀರಾತಿನ ಚಿತ್ರೀಕರಣ ಹೇಗಿತ್ತು ಗೊತ್ತಾ? ತೆರೆಮರೆಯ ವಿಡಿಯೋ ಹಂಚಿಕೊಂಡ ದುಬೈ ಎಮಿರೇಟ್ಸ್