ಸಕಲೇಶಪುರದ ಈ ಸಲಗನಿಗೆ ಕಾಡಿನ ಹುಲ್ಲಿಗಿಂತ ನಮ್ಮ ಮನೆಗಳಲ್ಲಿ ಮಾಡುವ ಅಡುಗೆಯೇ ಇಷ್ಟ ಅಂತ ಕಾಣುತ್ತೆ!!
ಸಕಲೇಶಪುರದ ಆಲೂರಿನಲ್ಲಿ ಸಲಗವೊಂದು ಮನೆಯೊಂದರ ಅಡುಗೆ ಕೋಣೆಯ ಕಿಟಕಿಯನ್ನು ಮುರಿದು ತನ್ನ ಸೊಂಡಿಲಿಗೆ ಸಿಗುವುದನ್ನೆಲ್ಲ ಎಳೆದುಕೊಂಡು ತಿನ್ನುತ್ತಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಕಾಡುಪ್ರಾಣಿಗಳು ಮಾನವ ವಾಸ ಸ್ಥಳಗಳಿಗೆ ನುಗ್ಗುವುದು ಮಾತ್ರ ನಿಲ್ಲುತ್ತಿಲ್ಲ. ವನ್ಯಜೀವಿ ಹಾಗೆ ಸುಮ್ಮನೆ ಹವಾ ಬದಲಾವಣೆಗೆ ಅಂತ ರಾತ್ರಿ ನಾವೆಲ್ಲ ಮಲಗಿದಾಗ ಊರುಗಳ ಅಂಚಿಗೆ ಬಂದು ಊರ ಮುಂದಿನ ಕೆರೆ ಇಲ್ಲವೇ ಹೊಂಡದಲ್ಲಿ ನೀರು ಕುಡಿದು ಒಂದು ರೌಂಡ್ ವಾಕ್ ಮುಗಿಸಿಕೊಂಡು ವಾಪಸ್ಸು ಹೋದರೆ ಯಾರಿಗೂ ಸಮಸ್ಯೆ ಇರುವುದಿಲ್ಲ. ಆದರೆ ಇವು ಊರ ಕಡೆ ಬರೋದೇ ಹಾಳು ಮಾಡೋದಿಕ್ಕೆ. ಸಸ್ಯಹಾರಿ ಪ್ರಾಣಿಗಳಾದರೆ ಬೆಳೆದು ನಿಂತ ಪೈರನ್ನು ಹಾಳುಮಾಡುತ್ತವೆ, ಚಿರತೆ, ಹುಲಿಯಂಥ ಮಾಂಸಾಹಾರಿಗಳಾದರೆ, ಮೇಕೆ, ಕುರಿ, ದನ-ಕರು ಮತ್ತು ನಾಯಿಗಳನ್ನು ಎತ್ತಿಕೊಂಡು ಹೋಗುತ್ತವೆ. ಹಾಸನ ಜಿಲ್ಲೆಯ ಕಾಡು ಪ್ರದೇಶಗಳಳಲ್ಲಿ ವಾಸವಾಗಿರುವ ಆನೆಗಳು ಹಾಳುಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆ ಅಡುಗೆ ಮನೆಗಳಿಗೆ ಲಗ್ಗೆ ಇಡುತ್ತಿವೆ.
ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಸಕಲೇಶಪುರದ ಆಲೂರಿನಲ್ಲಿ ಸಲಗವೊಂದು ಮನೆಯೊಂದರ ಅಡುಗೆ ಕೋಣೆಯ ಕಿಟಕಿಯನ್ನು ಮುರಿದು ತನ್ನ ಸೊಂಡಿಲಿಗೆ ಸಿಗುವುದನ್ನೆಲ್ಲ ಎಳೆದುಕೊಂಡು ತಿನ್ನುತ್ತಿದೆ. ಮನೆಯಲ್ಲಿ ವಾಸ ಮಾಡುವ ಜನಕ್ಕೆ ಆನೆಯ ದಾಳಿ ಗೊತ್ತಾಗಿಲ್ಲ ಅಂತೇನೂ ಇಲ್ಲ. ಅವರು ನಿಂತು ಅಸಹಾಯಕತೆಯಿಂದ ಅದರ ಸೊಂಡಿಲನ್ನು ನೋಡುತ್ತಿದ್ದಾರೆ.
ಜನರೇ ಹೇಳುವಂತೆ ಆನೆ ಎಷ್ಟೇ ಗಲಾಟೆ ಮಾಡಿ ಓಡಿಸಲು ಪ್ರಯತ್ನಿಸಿದರೂ ಅದು ಕದಲುವುದಿಲ್ಲವಂತೆ. ತಿನ್ನಲು ಏನೂ ಸಿಗದ ಪಕ್ಷದಲ್ಲಿ ಮಾತ್ರ ಅದು ಹಾಳು ಮಾಡಿದ ಜಾಗವನ್ನು ತಾನಾಗೇ ಬಿಟ್ಟು ಹೋಗುತ್ತದೆ. ಇವುಗಳ ಉಪಟಳ ಹೆಚ್ಚಾಗುತ್ತಿದೆ, ಪದೇಪದೆ ಅವು ಊರೊಳಗೆ ನುಗ್ಗಿ ಮನೆಗಳನ್ನು ಹಾಳಗೆಡವುತ್ತಿವೆ ಅಂತ ಜನ ದೂರಿದರೂ ಸರ್ಕಾರ ಒಂದು ಕಾಂಕ್ರೀಟ್ ಯೋಜನೆ ಜಾರಿಗೊಳಿಸುತ್ತಿಲ್ಲ.