ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಉಡುಪಿ ಜಿಲ್ಲೆಯ ಮಲ್ಪೆ ಬೀಚ್ನಿಂದ ತೆರಳಿದರೆ ಸಿಗುವ ಸೈಂಟ್ ಮೇರಿಸ್ ದ್ವೀಪ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ವಿದೇಶಿ ಪ್ರವಾಸಿಗರೂ ಬರುತ್ತಾರೆ. ಈ ಬಾರಿ ಅವಧಿಪೂರ್ವ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಯ ಕಾರಣ ಈಗಲೇ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಉಡುಪಿ, ಮೇ 19: ಮಕ್ಕಳಿಗೆ ಶಾಲೆಗೆ ರಜೆ ಎಂದು ಉಡುಪಿಯ ಮಲ್ಪೆ ಬೀಚ್ ಕಡೆ ಪ್ರವಾಸ ಹೋಗುವ ಯೋಚನೆ ಮಾಡಿದ್ದರೆ ಗಮನಿಸಿ. ಅವಧಿಗೂ ಮುನ್ನ ಮುಂಗಾರು ಮಳೆ ಶುರುವಾಗುವ ಮುನ್ಸೂಚನೆ ಇರುವುದರಿಂದ ಮತ್ತು ಮುಂಗಾರುಪೂರ್ವ ಮಳೆ ಹೆಚ್ಚಾಗಿರುವ ಕಾರಣ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ದ್ವೀಪ ತಲುಪಲು ಏಳು ಕಿಲೋಮೀಟರ್ ಬೋಟಿನ ಪ್ರಯಾಣ ಮಾಡಬೇಕಾಗುತ್ತದೆ. ಸದ್ಯ ಗಾಳಿ ಬೀಸುವಿಕೆ ಹೆಚ್ಚಾಗಿದ್ದು, ಮಳೆಯೂ ಇರುವುದರಿಂದ ಪ್ರವಾಸ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ಮಲ್ಪೆಯಲ್ಲಿ ಕಡಲ ತೀರದ ವಾಟರ್ ಸ್ಪೋರ್ಟ್ಸ್ ಬಂದ್ ಮಾಡಲಾಗಿದೆ. ತೇಲುವ ಸೇತುವೆ ತೆರವುಗೊಳಿಸಲಾಗಿದೆ. ಪ್ಯಾರಾಸೈಲಿಂಗ್ಗೂ ಅವಕಾಶ ಇಲ್ಲ. ಇನ್ನು ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಲು ಸೆಪ್ಟೆಂಬರ್ 15 ವರೆಗೆ ಕಾಯಬೇಕು. ಜೂನ್ ಒಂದರ ನಂತರ ಬೀಚ್ಗೂ ಬೇಲಿ ಹಾಕಲಾಗುತ್ತದೆ. ಹಾರ್ಬರ್ ಕ್ರಾಫ್ಟ್ ನಿಯಮಾವಳಿ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.