ಕಾವೇರಿ ನದಿಯಲ್ಲಿ ಐವರು ಜಲಸಮಾಧಿ ಕೇಸ್: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
Mandya News: ಮಂಡ್ಯದ ಮುತ್ತತ್ತಿ ಕಾವೇರಿ ನದಿಯಲ್ಲಿ ಕಾಲು ಜಾರಿ ಮುಳುಗುತ್ತಿದ್ದವರನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐದು ಮಂದಿ ಜಲಸಮಾಧಿಯಾದ ದಾರುಣ ಘಟನೆ ಮುತ್ತತ್ತಿಯಲ್ಲಿ ನಡೆದಿತ್ತು. ಈ ವೇಳೆ ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿದ ಏಕೈಕ ವ್ಯಕ್ತಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಕ್ಷಣ ಅಲ್ಲಿ ಆಗಿದ್ದೇನೆಂಬ ಬಗ್ಗೆ ವಿವರಿಸಿದ್ದಾರೆ.
ಮುಖ್ಯಾಂಶಗಳು
- ಕಾವೇರಿ ನದಿಯಲ್ಲಿ ನಿನ್ನೆ ಐವರು ಜಲಸಮಾಧಿ ಪ್ರಕರಣ
- ಘಟನೆ ಬಗ್ಗೆ ಬದುಕುಳಿದ ಏಕೈಕ ವ್ಯಕ್ತಿಯಿಂದ ವಿವರಣೆ
- ಆ ಕ್ಷಣದಲ್ಲಿ ಆಗಿದ್ದೇನೆಂದು ಇಂಚಿಂಚೂ ಬಿಚ್ಚಿಟ್ಟ ವ್ಯಕ್ತಿ
ಮಂಡ್ಯ, ಜೂನ್, 25: ಮುತ್ತತ್ತಿಯ ಕಾವೇರಿ ನದಿಯಲ್ಲಿ ಜಲಸಮಾಧಿಯಾಗಿದ್ದ ಐವರ ಮರಣೋತ್ತರ ಪರೀಕ್ಷೆ ಮಂಡ್ಯದ ಮಿಮ್ಸ್ ಶವಾಗಾರದಲ್ಲಿ ನಡೆದಿದೆ. ಶವಾಗಾರದ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಮ್ಮವರನ್ನು ಕಳೆದುಕೊಂಡು ಗೋಳಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಘಟನೆಯಲ್ಲಿ ಬದುಕುಳಿದಿರುವ ರವಿ ಏನಾಯ್ತು ಎಂಬುದನ್ನು ವಿವರಿಸಿದ್ದಾರೆ. ಬೆಂಗಳೂರಿನಿಂದ ಕಬ್ಬಾಳಿಗೆ ಬಂದಿದ್ದ ನಾವು ಬೀಗರೂಟ ಮುಗಿಸಿ ತಾನೂ ಸೇರಿದಂತೆ 6 ಜನ ಕಾರಿನಲ್ಲಿ ಮುತ್ತತ್ತಿಗೆ ಹೋಗಿದ್ದೆವು. ನೀರಿನಲ್ಲಿ ಆಟವಾಡುವಾಗ ಅಕ್ಕ ವಿಜಯಮ್ಮ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನ ರಕ್ಷಿಸಲು ಪತ್ನಿ ಶ್ವೇತಾ, ಮಗಳು ಚೈತ್ರಾ, ಅಕ್ಕನ ಮಗಳು ಪ್ರಿಯಾಂಕಾ ಪ್ರಯತ್ನಿಸಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಎಲ್ಲರನ್ನೂ ಕಾಪಾಡಲೆಂದು ನೀರಿಗಿಳಿದ ಕಾರು ಚಾಲಕ ಮತ್ತು ಸ್ನೇಹಿತನಾಗಿರುವ ಮಹೇಶ್ ಕೂಡ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಿಸಲು ಹೋಗಿ ನೀರಿಗೆ ಬಿದ್ದಿದ್ದ ತನ್ನನ್ನು ಸ್ಥಳೀಯರು ಕಾಪಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
