ಪಂಚೆ ಉಟ್ಟು ಅದ್ಹೇಗಯ್ಯ ಓಡಿಸ್ಲಿ ಸೈಕಲ್ನಾ ಅಂದರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ!
ಆಯೋಜಕರು ಮತ್ತು ಸೈಕಲ್ ಜೊತೆ ಅವರು ಫೋಟೋ ಸೆಷನ್ಗೆ ನಿಂತಾಗ ವರದಿಗಾರರೊಬ್ಬರು ಸರ್ ಸೈಕಲ್ ಮೇಲೆ ಒಂದು ರೌಂಡ್ ಹಾಕಿ ಅಂತ ಹೇಳಿದ್ದಾರೆ. ಅದಕ್ಕೆ ಬಾದಾಮಿಯ ಶಾಸಕರು, ‘ಹೇ, ಪಂಚೆ ಹಾಕ್ಕಂಡಿದ್ದೀನಿ, ಆಗಲ್ಲ ಕಣಪ್ಪ,’ ಅಂತ ಹೇಳಿದ್ದಾರೆ. ಅಲ್ಲಿದ್ದವರೆಲ್ಲ ಅವರ ಮಾತಿಗೆ ಜೋರಾಗಿ ನಕ್ಕಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯವರ ಹಾಸ್ಯ ಪ್ರಜ್ಞೆ ಜಗಜ್ಜಾಹೀರು. ಮುಖ್ಯಮಂತ್ರಿಗಳಾಗಿದ್ದಾಗ, ಅದಕ್ಕೂ ಮೊದಲು ಸಚಿವರಾಗಿದ್ದಾಗ ವಿಧಾನ ಸಭೆಯಲ್ಲಿ, ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ, ಇಲ್ಲವೇ ಸರ್ವಜನಿಕ ಸಭೆಯಲ್ಲಿ ಸಿಡಿಸುತ್ತಿದ್ದ ಮತ್ತು ಈಗಲೂ ಸಂದರ್ಭಕ್ಕೆ ಅನುಗುಣವಾಗಿ ಸಿಡಿಸುವ ಜೋಕ್ಗಳು ಬಹಳ ಫೇಮಸ್. ಅವರು ಮಾತಾಡುವ ಶೈಲಿ ಕೇಳುಗರಿಗೆ ಒರಟು ಎನಿಸುತ್ತದೆ. ಆದರೆ ಗ್ರಾಮೀಣ ಭಾಗದಿಂದ ಮುಖ್ಯವಾಹಿನಿಗೆ ಬಂದ ನಾಯಕರಾಗಿರುವ ಅವರು ಗ್ರಾಮ್ಯ ಶೈಲಿಯಲ್ಲಿಯೇ ಮಾತಾಡುತ್ತಾರೆ. ಅದು ಕೆಲವರಿಗೆ ಒರಟು ಅನಿಸುತ್ತದೆ.
ಸಿದ್ದರಾಮಯ್ಯ ವಿರೋಧ ಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿದೆ. ಆದರೆ, ಎಲ್ಲ ವಿರೋಧಿ ನಾಯಕರರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅವರ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಡುವೆ ಯಾವತ್ತಿಗೂ ಒಂದು ಉತ್ತಮ ಬಾಂಧವ್ಯ ಇದೆ. ನಿಮಗೆ ನೆನಪರಿಬಹುದು. ಸಿದ್ದರಾಮಯ್ಯ ಅವರ ಹಿರಿಯ ಪುತ್ರ ದಿವಂಗತ ರಾಕೇಶ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಯಡಿಯೂರಪ್ಪ ಅವರನ್ನು ತಬ್ಬಿಕೊಂಡು ಚಿಕ್ಕ ಮಗುವಿನಂತೆ ಅವರು ಅತ್ತಿದ್ದರು.
ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಬೆಂಗಳೂರಿನಲ್ಲಿ ಶನಿವಾರ ನಡೆದ ಒಂದು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಭಾಗಿಯಾಗಿದ್ದರು. ಅದೊಂದು ಸೈಕಲ್ ಅಭಿಯಾನದಂತೆ ಗೋಚರವಾಗುತ್ತಿದೆ. ಅಲ್ಲಿರುವ ಆಯೋಜಕರು ಮತ್ತು ಸೈಕಲ್ ಜೊತೆ ಅವರು ಫೋಟೋ ಸೆಷನ್ಗೆ ನಿಂತಾಗ ವರದಿಗಾರರೊಬ್ಬರು ಸರ್ ಸೈಕಲ್ ಮೇಲೆ ಒಂದು ರೌಂಡ್ ಹಾಕಿ ಅಂತ ಹೇಳಿದ್ದಾರೆ. ಅದಕ್ಕೆ ಬಾದಾಮಿಯ ಶಾಸಕರು, ‘ಹೇ, ಪಂಚೆ ಹಾಕ್ಕಂಡಿದ್ದೀನಿ, ಆಗಲ್ಲ ಕಣಪ್ಪ,’ ಅಂತ ಹೇಳಿದ್ದಾರೆ. ಅಲ್ಲಿದ್ದವರೆಲ್ಲ ಅವರ ಮಾತಿಗೆ ಜೋರಾಗಿ ನಕ್ಕಿದ್ದಾರೆ. ಹಾಗೆ ನೋಡಿದರೆ ಅವರು ಹೇಳಿದ್ದು ಜೋಕಲ್ಲ, ಆದರೆ, ಅವರ ಹೇಳಿರುವ ಶೈಲಿಯಿದೆಯಲ್ಲ, ಅದು ಜನರನ್ನು ನಗುವಂತೆ ಮಾಡುತ್ತದೆ.
ಇದನ್ನೂ ಓದಿ: ಭಜರಂಗಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಸಚಿವ ಎಸ್ಟಿ ಸೋಮಶೇಖರ್; ವಿಡಿಯೋ ನೋಡಿ