ನಾಲಿಗೆ ಹರಿಬಿಟ್ಟ ಮಾಜಿ ಸಂಸದ: ಮಂಡ್ಯ ಜನ ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದ ಶಿವರಾಮೇಗೌಡ
ಮಾಜಿ ಸಂಸದ ಎಲ್ಆರ್ ಶಿವರಾಮೇಶಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ. ಈ ನಡುವೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಂಡ್ಯ ಜಿಲ್ಲೆಯ ಜನರ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ರಾಮನಗರದಿಂದ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲ ನರಸತ್ತವರು ಎಂದು ಇಲ್ಲಿಗೆ ಬಂದಿದ್ದಾರೆ. ಮಂಡ್ಯ ಜಿಲ್ಲೆಯ ಮುಖಂಡರು ಮತ್ತು ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಿ. ಮಂಡ್ಯ ಜಿಲ್ಲೆಯ ಜನತೆಗೆ ಕರೆ ಕೊಡುತ್ತೇನೆ “ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ (LR Shivarame Gowda) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ, ಕಾಂಗ್ರೆಸ್ ಸೇರಲು ನಿರ್ಧಾರ ಮಾಡಿದ್ದೇನೆ. ಸಿ.ಪಿ.ಯೋಗೇಶ್ವರ್ ರೀತಿ ನಾನು ಕೂಡ ಜಂಪಿಂಗ್ ಸ್ಟಾರ್. ಸಂಸದ ಡಾ. ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಸಿಪಿ ಯೋಗೇಶ್ವರ್ ಶ್ರಮವಹಿಸಿದರು. ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನೇ ಬಲಿ ಪಡೆದಿದ್ದಾರೆ. ಚನ್ನಪಟ್ಟಣ ಜನ ದಡ್ಡರಲ್ಲ, ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಚನ್ನಪಟ್ಟಣದಲ್ಲಿ ನಿಖಿಲ್ ಅಲ್ಲ ಹೆಚ್ಡಿ ಕುಮಾರಸ್ವಾಮಿ ನಿಂತರೂ ಗೆಲ್ಲಲು ಆಗಲ್ಲ. ಬಿವೈ ವಿಜಯೇಂದ್ರ, ಬಿಎಸ್ ಯಡಿಯೂರಪ್ಪ ಅವರಿಂದ ಸಿಪಿ ಯೋಗೇಶ್ವರ್ ಬಿಜೆಪಿ ತೊರೆದರು. ಬಿಜೆಪಿಯಲ್ಲಿನ ಗುಂಪುಗಾರಿಕೆಯಿಂದ ಯೋಗೇಶ್ವರ್ ಪಕ್ಷ ಬಿಟ್ಟರು. ಹೆಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿ ಲಾಟರಿಯಲ್ಲಿ ಸಿಎಂ ಆದವರು. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಗಾಡಿ ನಿಂತು ಹೋಗಿತ್ತು. ಪಾಪ ಮುಳುಗುವ ಹಡಗು ಎಂದು ಮಂಡ್ಯ ಜನರ ಕೈ ಹಿಡಿದರು ಎಂದು ವ್ಯಂಗ್ಯವಾಡಿದರು.
ಉನ್ನತ ಹುದ್ದೆಯಲ್ಲಿದ್ದು ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ ನಾಲ್ಕು ದಿನ ಇರುತ್ತಾರೆ. ಇದರ ಬದಲು, ದೇಶ ಸುತ್ತಿ ಬೃಹತ್ ಕೈಗಾರಿಕಾಗಳನ್ನು ಸ್ಥಾಪನೆ ಮಾಡಬೇಕಿತ್ತು. ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ