ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಸಾಗರದಲ್ಲಿ ನಡೆದ ಗಣೇಶ ವಿಸರ್ಜನಾ ಶೋಭಾಯಾತ್ರೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಯುವಕರೊಂದಿಗೆ ಸಂಭ್ರಮಿಸಿದರು. ಡಿಜೆ ಹಾಡಿನ ತಾಳಕ್ಕೆ ಹೆಜ್ಜೆ ಹಾಕಿದ ಅವರು, ಅಭಿಮಾನಿಗಳ ಒತ್ತಾಯದ ಮೇರೆಗೆ ಯುವಕರ ಹೆಗಲೇರಿ ನೃತ್ಯ ಮಾಡಿದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವಮೊಗ್ಗ, ಸೆಪ್ಟೆಂಬರ್ 27: ಜಿಲ್ಲೆಯ ಸಾಗರದಲ್ಲಿ ಗಣೇಶ ವಿಸರ್ಜನಾ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಜನ್ನತ್ ನಗರದ ಜೈ ಭುವನೇಶ್ವರಿ ಗಣಪತಿ ಮಂಡಳಿ ವತಿಯಿಂದ ಆಯೋಜಿಸಿದ್ದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ರಾಷ್ಟ್ರೀಯ ಹೆದ್ದಾರಿಯ ಎಕ್ಸ್ ಸರ್ಕಲ್ ಬಳಿ ಗಣೇಶೋತ್ಸವದ ಸಂಭ್ರಮ ಮತ್ತಷ್ಟು ಜೋರಾಗಿತ್ತು. ಗಣೇಶ ವಿಸರ್ಜನಾ ಶೋಭಾಯಾತ್ರೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಕೂಡ ಭಾಗವಹಿಸಿ ಯುವಕರೊಂದಿಗೆ ಸಂಭ್ರಮಿಸಿದರು. ಎಕ್ಸ್ ಸರ್ಕಲ್ ಬಳಿ ಯುವಕರು ಮಾಜಿ ಸಚಿವರಿಗೆ ಅದ್ಧೂರಿ ಸ್ವಾಗತ ಕೋರಿದರು. ಡಿಜೆ ಹಾಡಿನ ತಾಳಕ್ಕೆ ಯುವಕರೊಂದಿಗೆ ಹೆಜ್ಜೆ ಹಾಕಿದ ಹರತಾಳು ಹಾಲಪ್ಪ, ಅಭಿಮಾನಿಗಳ ಒತ್ತಾಯದ ಮೇರೆಗೆ ಕೇಸರಿ ಶಾಲು ಬೀಸುತ್ತಾ ಯುವಕರ ಹೆಗಲೇರಿ ನೃತ್ಯ ಮಾಡಿದರು. ಹಾಲಪ್ಪ ಅವರ ಉತ್ಸಾಹದ ಕ್ಷಣಗಳು ಮೆರವಣಿಗೆಯಲ್ಲಿದ್ದವರ ಗಮನ ಸೆಳೆದವು.
ಮಾಜಿ ಸಚಿವರ ಸರಳತೆ ಹಾಗೂ ಉತ್ಸಾಹಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಯುವಕರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
