‘ಗೀತಾ ಮನೆ ಶಿವಮೊಗ್ಗದಲ್ಲಿ ಇಲ್ಲ ಅನ್ನೋಕೆ ಆಗಲ್ಲ’: ಪತ್ನಿ ಪರ ಶಿವಣ್ಣ ಮಾತು

|

Updated on: Apr 11, 2024 | 9:10 PM

‘ಗೀತಾ ನಮ್ಮೂರ ಮಗಳು ಅನ್ನೋದು ನಿಮ್ಮ ಮನಸ್ಸಿನಲ್ಲಿ ಇಲ್ಲವೇ? ಅವರನ್ನು ನಿಮ್ಮ ತಾಯಿ, ಅಕ್ಕ, ಸ್ನೇಹಿತೆ, ತಂಗಿ ಅಂತ ತಿಳಿದುಕೊಳ್ಳಿ. ಇವರೇ ದೊಡ್ಡ ಲೀಡರ್​ ಆಗಬಹುದು. ಹೆಣ್ಮಗಳು ಅಂತ ಬೇಡ ಅಂತೀರಾ? ಎಲ್ಲ ಕ್ಷೇತ್ರದಲ್ಲೂ ಹೆಣ್ಮಕ್ಕಳು ಮುಂದೆ ಇದ್ದಾರೆ. ಹೆಣ್ಮಕ್ಕಳೇ ಸ್ಟ್ರಾಂಗ್ ಗುರು. ಅವಕಾಶ ಕೊಟ್ಟು ನೋಡಿ. ಖಂಡಿತಾ ಕೆಲಸ ಮಾಡುತ್ತಾರೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ರಂಗೇರಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ನಟ ಶಿವರಾಜ್​ಕುಮಾರ್​ (Shivarajkumar) ಅವರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ‘ಗೀತಾ ಹುಟ್ಟಿದ್ದು ಬಂಗಾರಪ್ಪನವರ ಕುಟುಂಬದಲ್ಲಿ. ಅವರು ಶಿವಮೊಗ್ಗ ಜಿಲ್ಲೆಯವರು. ಶ್ರೇಷ್ಠ ನಾಯಕ ಅಂತ ಹೆಸರು ಪಡೆದಿದ್ದರು. ಗೀತಾ ಹುಟ್ಟಿದ್ದು, ಓದಿದ್ದು ಇಲ್ಲಿ. ಅವರ ಮನೆ ಇಲ್ಲಿ ಇಲ್ಲ ಅಂತ ನೀವು ಹೇಳೋಕೆ ಆಗಲ್ಲ. ಹಾಗಂತ 365 ದಿನ ಅವರು ಇಲ್ಲಿಯೇ ಇರಬೇಕು ಅಂತೇನೂ ಇಲ್ಲ. ಈಗ ಇರುವ ಸೌಲಭ್ಯಕ್ಕೆ ಅಮೆರಿಕದಲ್ಲಿ ಕುಳಿತು ಆಪರೇಷನ್​ ಮಾಡುತ್ತಾರೆ. ಹಾಗಿರುವಾಗ ಎಲ್ಲಿದ್ದರೂ ಕೆಲಸ ಮಾಡಬಹುದು. ಗೀತಾ ಏನು ಮಾಡಬೇಕು ಎಂಬುದನ್ನು ನೀವು ಹೇಳಬೇಕು. ಅವರಿಗೂ ಅದು ತಿಳಿದಿದೆ. ಎಲ್ಲ ಸಮಸ್ಯೆಗಳನ್ನು ಕೇಳಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಕುಳಿತುಕೊಂಡು ಸಮಸ್ಯೆ ಬಗೆಹರಿಸುತ್ತಾರೆ. ಎಲ್ಲರಿಗೂ ಒಂದು ಮೊದಲ ಅವಕಾಶ ಅಂತ ಬರುತ್ತದೆ. ಎಲ್ಲರೂ ಹೊಸಬರೇ ಆಗಿದ್ದರೆ ಗೊಂದಲ ಆಗಬಹುದು. ಆದರೆ ಹಾಗಿಲ್ಲವಲ್ಲ. ನಿಮಗೂ ಅನುಭವ ಆಗಿದೆ. ಅದನ್ನು ಉಪಯೋಗಿಸಿ. ಯಾರೋ ಏನೋ ಹೇಳ್ತಾರೆ ಅಂತ ಅದನ್ನು ಕೇಳಬೇಡಿ. ನಿಮ್ಮ ಮನಸ್ಸು ಏನು ಹೇಳತ್ತೋ ಅದನ್ನು ಕೇಳಿ’ ಎಂದು ಶಿವಣ್ಣ (Shivanna)  ಹೇಳಿದ್ದಾರೆ. ಶಿವಮೊಗ್ಗದ ಅನೇಕ ಊರುಗಳಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.