Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೋಯಿಂಗ್ ಸಿಬ್ಬಂದಿಯ ಕರಾಳ ಸ್ವರೂಪ ತೋರುವ ವಿಡಿಯೋಗಳನ್ನು ನೋಡಿದ ಬಳಿಕ ಸರ್ಕಾರ ಕಣ್ಣು ತೆರೆದಿದೆ

ಟೋಯಿಂಗ್ ಸಿಬ್ಬಂದಿಯ ಕರಾಳ ಸ್ವರೂಪ ತೋರುವ ವಿಡಿಯೋಗಳನ್ನು ನೋಡಿದ ಬಳಿಕ ಸರ್ಕಾರ ಕಣ್ಣು ತೆರೆದಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 03, 2022 | 6:19 PM

ಪಾರ್ಕಿಂಗ್​ಗೆ ಮೀಸಲಾಗಿರುವ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನೂ ಅವರು ಎತ್ತಿಕೊಂಡು ಹೋಗುತ್ತಾರೆ. ಹಾಗೆ ನೋಡಿದರೆ, ಯಾವುದಾದರೂ ವಾಹನವನ್ನೂ ಟೋ ಮಾಡುವ ಮೊದಲು ಸಂಚಾರಿ ಪೊಲೀಸರು ಆ ನಿರ್ದಿಷ್ಟ ವಾಹನದ ನಂಬರ್ ಉಲ್ಲೇಖಿಸಿ ಘೋಷಣೆ ಮಾಡಬೇಕು. ಆದರೆ ಪೊಲೀಸರು ಹಾಗೆ ಮಾಡುವುದಿಲ್ಲ.

ಟೋಯಿಂಗ್ ಮಾಫಿಯಾದ (towing mafia) ಬಗ್ಗೆ ನಾವು ಸುಮಾರು ಸಲ ಚರ್ಚೆ ಮಾಡಿದ್ದೇವೆ. ಸಾರ್ವಜನಿಕರು ಸಹ ಬೇಕಾಬಿಟ್ಟಿಯಾಗಿ ಟೋಯಿಂಗ್ ಮಾಡಿ ವಾಹನಗಳನ್ನು ಎತ್ತಿಕೊಂಡು ಹೋಗುವ ಟ್ರಾಫಿಕ್ ಪೊಲೀಸ್ (traffic police) ಮತ್ತು ಟೋಯಿಂಗ್ ಸಿಬ್ಬಂದಿ ವಿರುದ್ಧ ಆಕ್ಷೇಪ ಮತ್ತು ಆಕ್ರೋಷ ವ್ಯಕ್ತಪಡಿಸಿದ ನಂತರ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಯೊಂದನ್ನು ನಡೆಸಿದರು. ಅದಾದ ಮೇಲೆ ಮುಖ್ಯಮಂತ್ರಿಗಳು ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಅವರಿಗೆ ಟೋಯಿಂಗ್ ಗೆ ಸಂಬಂಧಿಸಿದ ಮಾಫಿಯಾ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಟೋಯಿಂಗ್ ಸಿಬ್ಬಂದಿ ಅಂಧಾದುಂಧಿಯಾಗಿ ನಡೆಸುವ ಕೃತ್ಯಗಳಿಗೆ ಸಾಕ್ಷಿಯಾಗಿ ನಮಗೆ ಹಲವು ವಿಡಿಯೋಗಳು ಲಭ್ಯವಾಗಿವೆ. ಅವುಗಳನ್ನು ನೋಡಿದರೆ ಸಿಬ್ಬಂದಿಯ ದುರಳತನ ನಿಮಗೆ ಗೊತ್ತಾಗುತ್ತದೆ. ಪಾರ್ಕಿಂಗ್​ಗೆ ಮೀಸಲಾಗಿರುವ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನೂ ಅವರು ಎತ್ತಿಕೊಂಡು ಹೋಗುತ್ತಾರೆ. ಹಾಗೆ ನೋಡಿದರೆ, ಯಾವುದಾದರೂ ವಾಹನವನ್ನೂ ಟೋ ಮಾಡುವ ಮೊದಲು ಸಂಚಾರಿ ಪೊಲೀಸರು ಆ ನಿರ್ದಿಷ್ಟ ವಾಹನದ ನಂಬರ್ ಉಲ್ಲೇಖಿಸಿ ಘೋಷಣೆ ಮಾಡಬೇಕು. ಆದರೆ ಪೊಲೀಸರು ಹಾಗೆ ಮಾಡುವುದಿಲ್ಲ.

ಇಲ್ಲಿ ನೋಡಿ, ಡೆಲಿವರಿ ಬಾಯ್ ಒಬ್ಬನ ದ್ವಿಚಕ್ರ ವಾಹನವನ್ನು ಟೋಯಿಂಗ್ ಸಿಬ್ಬಂದಿ ಎತ್ತಿಕೊಂಡು ಹೋಗುತ್ತಿದ್ದಾರೆ. ದಯವಿಟ್ಟು ಅದನ್ನು ಬಿಟ್ಟುಬಿಡಿ, ಆಹಾರ ಡೆಲಿವರಿ ಮಾಡುವುದಿದೆ ಅಂತ ಬಾಯ್ ಅವರ ಹಿಂದೆ ಓಡುತ್ತಿದ್ದಾನೆ ಮತ್ತು ಹತಾಷೆ ಹಾಗೂ ಆಕ್ರೋಷದಿಂದ ತನ್ನ ವಾಹನ ಎಳೆಯುತ್ತಿದ್ದಾನೆ. ಈ ಎಳೆದಾಟದಲ್ಲಿ ಅವನು ಡೆಲಿವರಿ ಮಾಡಬೇಕಿದ್ದ ಆಹಾರದ ಪೊಟ್ಟಣ ನೆಲಕ್ಕೆ ಬೀಳುತ್ತದೆ. ಆ ಆರ್ಡರ್ ಎಷ್ಟು ರೂಪಾಯಿಗಳದಿತ್ತೋ? ಅದನ್ನು ಅವನೇ ಭರಿಸಬೇಕು. ಅವನ ವೇಷ ಭೂಷಣ ನೋಡಿಯಾದರೂ ಟೋಯಿಂಗ್ ಸಿಬ್ಬಂದಿಗೆ ಡೆಲಿವರಿ ಬಾಯ್ ಅನ್ನೋದು ಗೊತ್ತಾಗಲಿಲ್ಲವೇ?

ಮತ್ತೊಂದು ವಿಡಿಯೋನಲ್ಲಿ ಕೆಂಪು ಕಾರಿನ ಅವಸ್ಥೆ ನೋಡಿ. ಕಾರನ್ನು ಹೇಗೆ ಟೋ ಮಾಡಬೇಕೆಂದು ಗೊತ್ತಿರದ ಸಿಬ್ಬಂದಿ ಅದರ ಮುಂಭಾಗವನ್ನೇ ಜಜ್ಜಿಹಾಕಿದ್ದಾರೆ. ಕಾರನ್ನು ಹಾಳು ಮಾಡಿದ್ದಕ್ಕೆ ಅವರ ಮುಖದಲ್ಲಿ ಪಶ್ಚಾತ್ತಾಪದ ಅಂಶವೇನಾದರೂ ಕಾಣುತ್ತಿದೆಯೇ? ಸಾಧ್ಯವೇ ಇಲ್ಲ.

ಇದನ್ನೆಲ್ಲ ನೋಡಿ, ಅನುಭವಿಸಿದ್ದ ಜನ ಆಕ್ರೋಷ ವ್ಯಕ್ತಪಡಿಸಿದಾಗ ಮತ್ತು ಮಾಧ್ಯಮಗಳು ಎಡಬಿಡದೆ ವರದಿ ಮಾಡಿದಾಗ ಸರ್ಕಾರ ಕಣ್ಣು ತೆರೆದಿದೆ.

ಇದನ್ನೂ ಓದಿ:  ಸಾರ್ವಜನಿಕರ ಮನವಿ ಮೇರೆಗೆ ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸಿದ್ದೇವೆ: ಆರಗ ಜ್ಞಾನೇಂದ್ರ ಹೇಳಿಕೆ