ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಕುಳಿತು ಶಾಸಕ ಶರಣಗೌಡ ಪ್ರತಿಭಟನೆ! ರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹ

Edited By:

Updated on: Sep 07, 2026 | 12:09 PM

ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿದರು. ಗುರುಮಠಕಲ್ ಮತ್ತು ಯಾದಗಿರಿ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸದಿರುವ ಸರ್ಕಾರದ ನಿರ್ಧಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. ರೈತರು ತೀವ್ರ ಸಂಕಷ್ಟದಲ್ಲಿದ್ದು, ಬರಗಾಲದಿಂದ ಸಾಯುತ್ತಿದ್ದಾರೆ ಎಂದು ಶರಣಗೌಡ ಪ್ರತಿಪಾದಿಸಿದರು.

ಬೆಂಗಳೂರು, ಸೆಪ್ಟೆಂಬರ್ 7: ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು. ಗುರುಮಠಕಲ್ ಮತ್ತು ಯಾದಗಿರಿ ಪ್ರದೇಶಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬರಪಟ್ಟಿ ಬಿಡುಗಡೆ ಮಾಡಿದಾಗ ಗುರುಮಠಕಲ್ ಮತ್ತು ಯಾದಗಿರಿ ಜಿಲ್ಲೆಗಳನ್ನು ಕೈಬಿಟ್ಟಿತ್ತು. ಈ ನಿರ್ಧಾರದಿಂದಾಗಿ ಈ ಪ್ರದೇಶಗಳ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಪ್ರತಿಭಟನೆಯ ವೇಳೆ ಶಾಸಕ ಶರಣಗೌಡ ಅವರು, ‘ರೈತರು ಸಾಯ್ತಾ ಇದ್ದಾರೆ. ನಾವು ಒಂದು ಗಂಟೆ ಬಿಸಿಲಿಗೆ ಕೂತರೆ ತಾಪಮಾನ ತಾಳಲಾಗುವುದಿಲ್ಲ. ಆದರೆ, ನಮ್ಮ ರೈತರು ಬಿಸಿಲು, ಬರಗಾಲದಲ್ಲಿ ನಿರಂತರವಾಗಿ ಕಷ್ಟಪಡುತ್ತಿದ್ದಾರೆ. ರೈತರ ಮಕ್ಕಳಿಗೆಲ್ಲ ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಅಭ್ಯಾಸ ಇರಲ್ಲ’ ಎಂದು ಸರ್ಕಾರದ ನಿಷ್ಕ್ರಿಯತೆಯನ್ನು ಪ್ರಶ್ನಿಸಿದರು.

ಬರ ತಾಲೂಕು ಘೋಷಣೆಯಿಂದ ವಂಚಿತರಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಮತ್ತು ಈ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಶಾಸಕ ಶರಣಗೌಡ ಆಗ್ರಹಿಸಿದರು. ಏತನ್ಮಧ್ಯೆ, ಮಾಜಿ ಸಚಿವ ಅಶ್ವಥ್ ನಾರಾಯಣ್ ಸಹ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಸಾಥ್ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us