IND vs WI: 6 ವರ್ಷಗಳ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
Harleen Deol's Maiden ODI Century: ಟೀಂ ಇಂಡಿಯಾದ ಹರ್ಲೀನ್ ದಿಯೋಲ್ ಬರೋಬ್ಬರಿ 6 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ತಮ್ಮ ಮೊದಲ ಶತಕ ಗಳಿಸಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ 103 ಎಸೆತಗಳನ್ನು ಎದುರಿಸಿದ ಹರ್ಲೀನ್ 115 ರನ್‌ಗಳ ಇನ್ನಿಂಗ್ಸ್ ಆಡಿದರು.
ಬರೋಬ್ಬರಿ 6 ವರ್ಷಗಳ ಹಿಂದೆಯೇ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ ಟೀಂ ಇಂಡಿಯಾದ ಹರ್ಲೀನ್ ಡಿಯೋಲ್ಗೆ ತಂಡದಲ್ಲಿ ಸಿಕ್ಕ ಅವಕಾಶಗಳು ಮಾತ್ರ ಬೆರಳೆಣಿಕೆಯಷ್ಟು. ಇದರಲ್ಲಿ ಹರ್ಲೀನ್ ಅವರದ್ದು ತಪ್ಪಿದ್ದು, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅವರು ಎಡವಿದ್ದರು. ಹೀಗಾಗಿ ಅವರಿಗೆ ತಂಡದಲ್ಲಿ ಖಾಯಂ ಸ್ಥಾನ ಎಂಬುದು ಇದುವರೆಗೂ ಸಿಕ್ಕಿರಲಿಲ್ಲ. ಆದರೀಗ ಪೂರ್ಣ ಲಯಕಂಡುಕೊಂಡಿರುವ ಹರ್ಲೀನ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇದರ ಜೊತೆಗೆ ಸರಣಿಯ ಎರಡನೇ ಪಂದ್ಯದಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಮೊದಲ ಏಕದಿನ ಶತಕವನ್ನು ಸಿಡಿಸಿದ್ದಾರೆ.
ಪ್ರಸ್ತುತ ಭಾರತ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಹರ್ಲೀನ್ ಡಿಯೋಲ್ 115 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. 2019 ರಿಂದ ಟೀಂ ಇಂಡಿಯಾದ ಭಾಗವಾಗಿರುವ ಹರ್ಲೀನ್ ಡಿಯೋಲ್ಗೆ ಇದು ಚೊಚ್ಚಲ ಶತಕವಾಗಿರುವುದು ಇನ್ನಷ್ಟು ವಿಶೇಷವಾಗಿದೆ.
6 ವರ್ಷಗಳ ವೃತ್ತಿ ಜೀವನ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, ಹರ್ಲೀನ್ ಡಿಯೋಲ್ 103 ಎಸೆತಗಳಲ್ಲಿ 115 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಈ ಶತಕದ ಇನ್ನಿಂಗ್ಸ್ನಲ್ಲಿ ಒಟ್ಟು 16 ಬೌಂಡರಿಗಳು ಸೇರಿದ್ದವು. ಈಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಹರ್ಲೀನ್ 111.65 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟೀಮ್ ಇಂಡಿಯಾ ಪರ ಇದು ಹರ್ಲೀನ್ ಡಿಯೋಲ್ ಅವರ 15 ನೇ ಏಕದಿನ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಅವರು ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಅರ್ಧಶತಕ ಸಿಡಿಸಿದರಾದರೂ ಅದನ್ನು ಶತಕವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅವರು ತಮ್ಮ ಶತಕದ ಕಾಯುವಿಕೆಯನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶತಕ ಪೂರೈಸಿದ ನಂತರ ಭಾವುಕರಾಗಿ ಕಾಣಿಸಿಕೊಂಡ ಹರ್ಲೀನ್ ಡಿಯೋಲ್ ಅವರ ಕಣ್ಣಲ್ಲಿ ನೀರು ತುಂಬಿತ್ತು. ಹರ್ಲೀನ್ ಏಕದಿನ ಮಾತ್ರವಲ್ಲದೆ ಟೀಂ ಇಂಡಿಯಾ ಪರ 24 ಟಿ20 ಪಂದ್ಯಗಳನ್ನೂ ಆಡಿದ್ದು, 251 ರನ್ ಗಳಿಸಿದ್ದಾರೆ.
ಬೃಹತ್ ಮೊತ್ತ ಕಲೆಹಾಕಿದ ಭಾರತ
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಕಲೆಹಾಕಿದೆ. ಇದರೊಂದಿಗೆ ಟೀಂ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಬೃಹತ್ ಸ್ಕೋರ್ ದಾಖಲೆಯನ್ನು ಸರಿಗಟ್ಟಿದೆ. ಇದಕ್ಕೂ ಮುನ್ನ 2017ರಲ್ಲಿ ಐರ್ಲೆಂಡ್ ವಿರುದ್ಧ ಭಾರತ ತಂಡ ಇಷ್ಟೇ ಮೊತ್ತವನ್ನು ಕಲೆಹಾಕಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ