ಹಾಸನದಲ್ಲಿ ಶಕ್ತಿ‌ ಪ್ರದರ್ಶನಕ್ಕೆ ಅಪಸ್ವರ:  ದಿಲ್ಲಿಯಿಂದಲೇ ಅನಾಮಧೇಯ ಪತ್ರಕ್ಕೆ ಸಿಎಂ ಸ್ಪಷ್ಟನೆ

ಹಾಸನದಲ್ಲಿ ಶಕ್ತಿ‌ ಪ್ರದರ್ಶನಕ್ಕೆ ಅಪಸ್ವರ: ದಿಲ್ಲಿಯಿಂದಲೇ ಅನಾಮಧೇಯ ಪತ್ರಕ್ಕೆ ಸಿಎಂ ಸ್ಪಷ್ಟನೆ

ರಮೇಶ್ ಬಿ. ಜವಳಗೇರಾ
|

Updated on:Nov 29, 2024 | 4:54 PM

ಮುಡಾ ನಿವೇಶನ, ವಾಲ್ಮೀಕಿ ಹಗರಣ, ವಕ್ಫ್‌ ವಿವಾದದಿಂದ ಕುಗ್ಗಿ ಮುಂದೇನು ಎಂಬತ್ತಿದ್ದ ಸಿದ್ದರಾಮಯ್ಯ ಅವರಿಗೆ ಮೂರು ಉಪಚುನಾವಣೆಯಲ್ಲಿನ ಗೆಲುವು ಹೊಸ ಹುಮ್ಮಸ್ಸು ತಂದಿದೆ. ಇದೇ ಸಂತಸದಲ್ಲಿ ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ಕಾಂಗ್ರೆಸ್ ಗೆಲುವಿನ ಪತಾಕೆಯನ್ನು ಹಾರಿಸಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿದ್ಧರಾಗಿದ್ದ ಸಿದ್ದರಾಮಯ್ಯನವರಿಗೆ ಪತ್ರ ಅಡ್ಡಿಯಾಗಿದ್ದು, ಇದೀಗ ಆ ಪತ್ರಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ, (ನವೆಂಬರ್ 29): ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಡಿ.5ರಂದು ಹಾಸನದಲ್ಲಿ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮುಡಾ ನಿವೇಶನ, ವಾಲ್ಮೀಕಿ ಹಗರಣವನ್ನು ವಿಪಕ್ಷಗಳು ಸಿದ್ದರಾಮಯ್ಯನವರ ಮೇಲೆ ಎತ್ತಿಕಟ್ಟುತ್ತಿರುವುದರಿಂದ ಅವರ ಅಭಿಮಾನಿಗಳು ಈ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸಂದೇಶ ನೀಡಲು ಮುಂದಾಗಿದೆ. ಇದಕ್ಕೆ ಜೆಡಿಎಸ್ ಭದ್ರಕೋಟೆಯಲ್ಲಿ ಒಂದು ಲಕ್ಷ ಜನರ ಸಮ್ಮುಖದಲ್ಲಿ ಅಬ್ಬರಿಸಲು ಸಿಎಂ ಸಿದ್ದರಾಮಯ್ಯ ಸನ್ನದ್ಧರಾಗಿದ್ದಾರೆ. ಆದರೆ, ಪಕ್ಷವನ್ನೂ ದೂರವಿಟ್ಟು ಸಮಾವೇಶ ಮಾಡುವ ಉದ್ದೇಶ ಏನು? ಸ್ವಾಭಿಮಾನ ಸಮಾವೇಶವನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡಬೇಕು. ಪಕ್ಷದ ವೇದಿಕೆ ಬಿಟ್ಟು ಸಮಾವೇಶ ಮಾಡುವ ಉದ್ದೇಶ ಒಳ್ಳೆಯದಲ್ಲ. ಪಕ್ಷದ ಚಿಹ್ನೆ ಬಳಸಿಕೊಂಡೇ ಸಮಾವೇಶ ಆಯೋಜನೆ ಮಾಡಿ. ಸಿಎಂ ಹಾಗೂ ಸಚಿವರಿಗೆ ತಿಳಿ ಹೇಳಿ ಎಂದು ಪತ್ರದಲ್ಲಿ ಬರೆಯಲಾಗಿದೆ. ಇನ್ನು ಪತ್ರ ರಾಜ್ಯ ಕಾಂಗ್ರೆಸ್​​ನಲ್ಲಿ ಕಂಪನ ಸೃಷ್ಟಿಸಿದ್ದು, ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ದೆಹಲಿಯಿಂದಲೇ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಶಕ್ತಿ‌ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಹಾಸನ: ಸಿದ್ದು ಸಮಾವೇಶಕ್ಕೆ ಕಾಂಗ್ರೆಸ್​ನಲ್ಲೇ ಅಪಸ್ವರ, ವರಿಷ್ಠರಿಗೆ ಪತ್ರ

ಹೈಕಮಾಂಡ್ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪಕ್ಷದ ವೇದಿಕೆಯಲ್ಲೇ ಸಮಾವೇಶ ಆಯೋಜನೆ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲರಿಗೂ ಹೇಳಿದ್ದೇನೆ. ಹಾಸನ ಸಮಾವೇಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೂ ಹೇಳಿದ್ದೇವೆ. ಕೆಪಿಸಿಸಿ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ನಡೆಯಲಿದ್ದು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಆಹ್ವಾನ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲಾ ಗೊಂದಲಗಳಿಗೆ ದೆಹಲಿಯಿಂದಲೇ ತೆರೆ ಎಳೆದರು.

Published on: Nov 29, 2024 04:52 PM