ಕೆಂಪೇಗೌಡರ ಜಯಂತಿಯಲ್ಲಿ ಕಣ್ಣೀರು ಹಾಕಿದ ಹಾಸನ ಡಿಸಿ, ಕಾರಣವೇನು ಗೊತ್ತಾ?
ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರು ಇಂದು ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲೇ ಕಣ್ಣೀರು ಹಾಕಿರುವ ಪ್ರಸಂಗ ಜರುಗಿದೆ. (ಜೂನ್ 27) ಕೆಂಪೇಗೌಡ ಜಯಂತಿ ನಿಮಿತ್ತ ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಹಿರಿಯ ಪತ್ರಕರ್ತ, ಲೇಖಕ, ಗುರುರಾಜ್ ಅವರು ಉಪನ್ಯಾಸ ನೀಡುತ್ತಿದ್ದ ವೇಳೆ ಆ ಒಂದು ಪ್ರಸಂಗಕ್ಕೆ ಕಣ್ಣೀರುಹಾಕಿದ್ದಾರೆ. ಹಾಗಾದ್ರೆ ಏನದು ಪ್ರಸಂಗ ಎನ್ನುವುದನ್ನು ನೋಡಿ.
ಹಾಸನ, (ಜೂನ್ 27): ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಕಣ್ಣೀರು ಹಾಕಿದ್ದಾರೆ. ಕೆಂಪೇಗೌಡ ಜಯಂತಿಯಲ್ಲಿ ಮೈಸೂರಿನ ಹಿರಿಯ ಪತ್ರಕರ್ತ, ಲೇಖಕ, ಗುರುರಾಜ್ ತಮ್ಮ ಭಾಷಣದಲ್ಲಿ ಕೆಂಪೇಗೌಡರ ಸೊಸೆ ಪ್ರಾಣ ತ್ಯಾಗ ಮಾಡಿರುವ ವಿಷಯ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿ ಸತ್ಯಭಾಮ ಕಣ್ಣೀರು ಹಾಕಿದರು.
ದಕ್ಷಿಣ ದ್ವಾರ ಕಟ್ಟುವಾಗ ಅಡೆತಡೆಯಾಗಿ ಪ್ರತಿನಿತ್ಯ ಕೋಟೆ ದ್ವಾರ ಬಿದ್ದು ಹೋಗುತ್ತಿತ್ತು. ಒಂದು ದಿನ ಕೆಂಪೇಗೌಡರಿಗೆ ಗರ್ಭಿಣಿ ಮಹಿಳೆಯ ನರಬಲಿ ನೀಡುವಂತೆ ಕನಸು ಬಿತ್ತು. ಆದರೆ ಕೆಂಪೇಗೌಡರು ಜನರಿಗೆ ಒಂದು ತೊಂದರೆಯನ್ನೂ ಕೊಡದ ನಾಯಕ ಬಲಿಕೊಡುವ ವಿಚಾರ ಅವರಿಂದ ಸಾಧ್ಯವಾಗದೆ ತಮ್ಮ ಜೊತೆಯವರಿಗೆ ಹೇಳಿ ಸುಮ್ಮನಾದರು. ಈ ವಿಷಯ ತಿಳಿದ ಕೆಂಪೇಗೌಡರ ಹಿರಿಯ ಸೊಸೆ ಲಕ್ಷ್ಮಮ್ಮ ತುಂಬು ಗರ್ಭಿಣಿ ತನ್ನ ಮಾವನ ಜವಾಬ್ದಾರಿ ಅರಿತು ನಡುರಾತ್ರಿ ಶಸ್ತ್ರಧಾರಿಯಾಗಿ ಹೋಗಿ ದಕ್ಷಿಣದ್ವಾರದ ಮೇಲೆ ನಿಂತು ತನ್ನ ಪ್ರಾಣ ತ್ಯಾಗ ಮಾಡಿದರು. ಬಳಿಕ ಸ್ಥಳಕ್ಕೆ ಹೋದ ಕೆಂಪೇಗೌಡರು ಜರ್ಜರಿತರಾಗಿಹೋಗಿದ್ದರು. ಲಕ್ಷ್ಮಮ್ಮನವರ ನೆನಪಿಗಾಗಿ ಒಂದು ದೇವಾಲಯವನ್ನೂ ಕಟ್ಟಿಸಿದ್ದಾರೆ. ಇಂದಿಗೂ ಕೋರಮಂಗಲದಲ್ಲಿ ಆ ದೇವಾಲಯ ಇದೆ ಇದು ಶಾಸನದಲ್ಲಿ ಉಲ್ಲೇಖವಿದೆ ಎಂದು ಪತ್ರಕರ್ತ, ಲೇಖಕ, ಗುರುರಾಜ್ ತಮ್ಮ ಭಾಷಣದಲ್ಲಿ ಹೇಳಿದರು. ಈ ಪ್ರಸಂಗವನ್ನ ಗಮನವಿಟ್ಟು ಆಲಿಸಿದ ಹಾಸನ ಡಿ.ಸಿ ಸತ್ಯಭಾಮ, ಪ್ರಾಣ ತ್ಯಾಗ ವಿಷಯ ಬಂದಾಗ ಕಣ್ಣೀರು ಹಾಕಿ ವಿಷಾದ ಭಾವ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ