ಮದುವೆ ಆಗುವುದಾಗಿ ನಂಬಿಸಿ ಮಗು ಕರುಣಿಸಿ ಯುವತಿಯ ವಂಚಿಸಿದ್ದ ಯುವಕನಿಗೆ ಮದುವೆ ಮಾಡಿಸಿದ ಪೊಲೀಸರು!
ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದ ಘಟನೆಯೊಂದರಲ್ಲಿ, ಪ್ರೀತಿಸಿ, ಗರ್ಭಿಣಿಯನ್ನಾಗಿಸಿ ಮಗುವಿಗೆ ಜನ್ಮ ನೀಡಿದ ನಂತರ ಯುವತಿಯನ್ನು ಕೈಬಿಟ್ಟು ಪರಾರಿಯಾಗಿದ್ದ ಯುವಕ ರಾಜುವಿಗೆ ಪೊಲೀಸರು ಮತ್ತು ಡಿಎಸ್‌ಎಸ್ ಮುಖಂಡರು ಸೇರಿ ಬುದ್ಧಿವಾದ ಹೇಳಿ, ಅಂಬೇಡ್ಕರ್ ಪ್ರತಿಮೆ ಎದುರು ಮದುವೆ ಮಾಡಿಸಿದ್ದಾರೆ. ನ್ಯಾಯ ಒದಗಿಸುವ ದೃಷ್ಟಿಯಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ಹಾಸನ, ಸೆಪ್ಟೆಂಬರ್ 7: ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ವಂಚಿಸಿ, ನಂತರ ಕೈಬಿಟ್ಟಿದ್ದ ಯುವಕನಿಗೆ ಪೊಲೀಸರು ಮತ್ತು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಸೇರಿ ಬುದ್ಧಿವಾದ ಹೇಳಿ ಮದುವೆ ಮಾಡಿಸಿದ್ದಾರೆ. ಬೀರಕನಹಳ್ಳಿ ಗ್ರಾಮದ ರಾಜು ಮತ್ತು ನಿಲುವಾಗಿಲು ಗ್ರಾಮದ ಅನ್ನಪೂರ್ಣ ನಡುವೆ ಪ್ರೀತಿ ಇತ್ತು. ಒಂದು ವರ್ಷದಿಂದ ಇಬ್ಬರೂ ಒಟ್ಟಿಗಿದ್ದರು. ಮದುವೆಯಾಗುವುದಾಗಿ ರಾಜು ಅನ್ನಪೂರ್ಣಗೆ ಭರವಸೆ ನೀಡಿದ್ದ. ಈ ನಡುವೆ ಅನ್ನಪೂರ್ಣ ಗರ್ಭಿಣಿಯಾಗಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜನಿಸಿದ ಬಳಿಕ ರಾಜು ಪ್ರಿಯತಮೆ ಹಾಗೂ ಮಗುವನ್ನು ಬಿಟ್ಟು ತಲೆಮರೆಸಿಕೊಂಡಿದ್ದ.
ಯುವಕನ ಈ ಕೃತ್ಯದಿಂದ ನ್ಯಾಯ ವಂಚಿತಳಾಗಿದ್ದ ಯುವತಿಯ ಪರವಾಗಿ ಪೊಲೀಸರು ಮತ್ತು ಡಿಎಸ್‌ಎಸ್ ಮುಖಂಡರು ಮಧ್ಯಪ್ರವೇಶಿಸಿದ್ದಾರೆ. ಹೇಗೋ ಪತ್ತೆ ಹಚ್ಚಿ ರಾಜುವನ್ನು ವಾಪಸ್ ಕರೆತಂದು, ಆತನಿಗೆ ಮನವೊಲಿಸಿ ಬುದ್ಧಿವಾದ ಹೇಳಿದ್ದಾರೆ. ಅಂತಿಮವಾಗಿ, ಸ್ಥಳೀಯ ಅಂಬೇಡ್ಕರ್ ಪುತ್ತಳಿ ಎದುರು ರಾಜು ಮತ್ತು ಅನ್ನಪೂರ್ಣಗೆ ಮದುವೆ ಮಾಡಿಸಿದ್ದಾರೆ. ಈ ಮೂಲಕ ವಂಚನೆಗೊಳಗಾಗಿದ್ದ ಯುವತಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ. ಪೊಲೀಸರು ಮತ್ತು ಡಿಎಸ್‌ಎಸ್ ಮುಖಂಡರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

