ಅಯೋಧ್ಯೆಗೆ ಹೋಗುತ್ತೇನೆಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಕ್ತವಾಗಿ ಕೊಂಡಾಡಿದ ಹೆಚ್ ಡಿ ದೇವೇಗೌಡ

|

Updated on: Jan 13, 2024 | 4:28 PM

ತನಗೀಗ 91-ವರ್ಷ ವಯಸ್ಸಾಗಿದ್ದು ಓಡಾಡಲು ಕಷ್ಟವಾಗುತ್ತಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು. 75ಕ್ಕಿಂತ ಹೆಚ್ಚು ವಯಸ್ಸಾದವರಿಗೆ ಬಿಜೆಪಿ ಟಿಕೆಟ್ ನೀಡಲ್ಲ, ಅದನ್ನು ಮನಗಂಡ ಗೌಡರು ಈ ನಿರ್ಧಾರವನ್ನು ಪ್ರಕಟಿಸಿದರೇ ಅಂತ ಭಾಸವಾಗುತ್ತಿದೆ.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರನ್ನು (HD Devegowda) ಆಲಿಸುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇನ್ನೂ ಜೆಡಿಎಸ್ ನಲ್ಲಿದ್ದಾರೆಯೇ ಅಂತ ಗೊಂದಲವುಂಟಾಗುತ್ತದೆ. ಅವರು ಮೂರ್ನಾಲ್ಕು ಬಾರಿ ಸಿದ್ದರಾಮಯ್ಯರನ್ನು ಹೊಗಳುತ್ತಾರೆ. ಮೊದಲಿಗೆ ಗೌಡರು, ಸಿದ್ದರಾಮಯ್ಯ ಅಯೋಧ್ಯೆಗೆ (Ayodhya) ಹೋಗಿ ರಾಮನ ದರ್ಶನ ಮಾಡುವುದಾಗಿ ಹೇಳಿರುವುದಕ್ಕೆ ಭೇಷ್ ಅನ್ನುತ್ತಾರೆ. ಅವರ ದೃಢ ನಿಲುವುದನ್ನು ಶ್ಲಾಘಿಸುತ್ತೇನೆ ಅಂತ ಹೇಳುವ ಅವರು, ಸಿದ್ದರಾಮಯ್ಯ 22 ರಂದು ಅಲ್ಲಿಗೆ ಹೋಗಲ್ಲ ಬೇರೆ ದಿನ ಹೋಗುತ್ತೇನೆ ಅಂತ ಹೇಳಿದ್ದಾರೆ ಅನ್ನುತ್ತಾರೆ. ಜನವರಿ 22 ರಂದು ಮುಜರಾಯಿ ಇಲಾಖೆ ಅಧೀನದಲ್ಲಿರುವ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ರಾಮನ ಪೂಜೆ ನಡೆಸಬೇಕೆಂದು ಸಿದ್ದರಾಮಯ್ಯ ಸರ್ಕಾರ ಒಂದು ಸುತ್ತೋಲೆ ಹೊರಡಿಸಿರುವುದನ್ನು ದೇವೇಗೌಡರು ಸ್ವಾಗತಿಸುತ್ತಾರೆ. ನಿನ್ನೆ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ತನ್ನ 5ನೇ ಗ್ಯಾರಂಟಿಗೆ ಚಾಲನೆ ನೀಡಿದ್ದನ್ನು ಸಹ ಮಾಜಿ ಪ್ರಧಾನಿ ಮುಕ್ತಕಂಠದಿಂದ ಹೊಗಳುತ್ತಾರೆ. ಇದೊಂದು ಉತ್ತಮ ಯೋಜನೆ, ಸರ್ಕಾರ ನಿರುದ್ಯೋಗಿ ಯುವಕರಿಗೆ ಹಣ ನೀಡಲಿ, ಮೊದಲ ಕಂತನ್ನು ಪಡೆವ ನಿರುದ್ಯೋಗಿ ಪದವೀಧರರು, ಅದನ್ನು ಅಯೋಧ್ಯೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲು ಬಳಸಲಿ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ