ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ಹೆಚ್​ಡಿ ರೇವಣ್ಣ

| Updated By: ಗಣಪತಿ ಶರ್ಮ

Updated on: Jul 02, 2024 | 2:53 PM

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣರನ್ನು ನೋಡಲು ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಹೇಳಿದರು. ಅದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಭವಾನಿ ರೇವಣ್ಣ ಜೈಲಿಗೆ ಹೋಗಿ ಮಗನನ್ನು ಭೇಟಿಯಾಗಿದ್ದರ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಒಟ್ಟು ಪ್ರಕರಣದ ಬಗ್ಗೆ ಅವರು ಹೇಳಿದ್ದೇನೆಂಬ ಮಾಹಿತಿ ಈ ವಿಡಿಯೋದಲ್ಲಿದೆ.

ಮೈಸೂರು, ಜುಲೈ 2: ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣರನ್ನು ನೋಡಲು ಅವರ ತಂದೆ, ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಜೈಲಿಗೆ ಹೋಗುವುದಿಲ್ಲವಂತೆ! ಹೀಗೆಂದು ಸ್ವತಃ ಅವರೇ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರಬರುವೆ ಎಂದರು.

ನಮ್ಮ ಕುಟುಂಬದ ಮೇಲೆ ಹಾಕಿರುವ ಕೇಸ್​ಗಳು ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರಕರಣಗಳು ಕೋರ್ಟ್​ನಲ್ಲಿ ಇರುವುದರಿಂದ ನಾನು ಮಾತಾಡಲ್ಲ. ನನಗೆ ದೇವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.

ಭವಾನಿ ರೇವಣ್ಣ ಮಗನನ್ನು ನೋಡಲು ಹೋಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾಯಿಯಾಗಿ ಮಗನನ್ನು ನೋಡಲು ಹೋಗಿರುತ್ತಾರೆ. ಅವರು ಏನೇನು ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಹಾಗೆಂದು ನಾನೀಗ ಪ್ರಜ್ವಲ್ ಭೇಟಿಯಾಗಲು ಹೋಗುವುದಿಲ್ಲ. ಒಂದು ವೇಳೆ ಹೋದರೆ, ‘ಅವನು ಏನೋ ಹೇಳಿಕೊಡಲು ಹೋಗಿದ್ದಾನೆ’ ಎನ್ನುತ್ತಾರೆ ಎಂದರು.

ಇದನ್ನೂ ಓದಿ: ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ಹೆಚ್ ಡಿ ರೇವಣ್ಣ

ಇಡೀ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಟಾರ್ಗೆಟ್ ಆದರಾ ಅಥವಾ ರೇವಣ್ಣ ಗುರಿಯಾದರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ಕಾಲ ಬಂದಾಗ ಉತ್ತರಿಸುವೆ ಎಂದರು. ಸಮಯ ಬಂದಾಗ ಎಳೆಎಳೆಯಾಗಿ ಬಿಚ್ಚಿಡಲಿದ್ದೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on