ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಐತಿಹಾಸಿಕ ಬಂಗಾರೇಶ್ವರ ದೇವಾಲಯ ಸಂಪೂರ್ಣ ಜಲಾವೃತ
ಭಾರಿ ಮಳೆಯ ಕಾರಣ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರ ಗ್ರಾಮದ ಐತಿಹಾಸಿಕ ಬಂಗಾರೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಜುಲೈ ಮೊದಲ ವಾರದಲ್ಲೇ ದೇಗುಲ ಮುಳುಗಡೆಯಾಗಿದ್ದು, ಇದೇ ಮೊದಲು ಎನ್ನಲಾಗಿದೆ. ಇದರಿಂದಾಗಿ, ಈ ವರ್ಷವಿಡೀ ಉತ್ತಮ ಮಳೆಯಾಗಲಿದೆ ಎಂದು ಭಕ್ತರು ನಂಬಿದ್ದಾರೆ.
ಕಾರವಾರ, ಜುಲೈ 10: ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಬ್ಬರದ ಮಳೆಯಿಂದಾಗಿ ಐತಿಹಾಸಿಕ ದೇವಸ್ಥಾನ ಜಲಾವೃತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರ ಗ್ರಾಮದಲ್ಲಿರುವ ಸುಮಾರು 1900 ವರ್ಷಗಳ ಹಳೆಯ ಬಂಗಾರೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಸುಮಾರು 164 ಏಕರೆ ವಿಸ್ತಿರ್ಣದ ಐತಿಹಾಸಿಕ ಕೆರೆಯಲ್ಲಿ ನೀರು ಅಪಾಯದ ಮಟ್ಟ ಮೀರಿ ಏರಿಕೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಜುಲೈ ಮೊದಲ ವಾರದಲ್ಲಿಯೇ ದೇವಸ್ಥಾನ ಜಲಾವೃತಗೊಂಡಿದೆ. ದೇವಸ್ಥಾನ ಜಲಾವೃತಗೊಂಡರೆ ವರ್ಷ ಪೂರ್ತಿ ಉತ್ತಮ ಮಳೆಯಾಗಲಿದೆ. ಯಾವ ವರ್ಷ ದೇವಸ್ಥಾನ ಜಲಾವೃತ ಆಗುವುದಿಲ್ಲವೋ ಆ ವರ್ಷ ಬರಗಾಲ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. 2 ನೇ ಶತಮಾನದಲ್ಲಿ ಕದಂಬರು ನಿರ್ಮಿಸಿದ ಪ್ರಸಿದ್ದ ದೇವಸ್ಥಾನ ಇದಾಗಿದ್ದು, ಸಂತಾನ ಇಲ್ಲದವರು ಇಲ್ಲಿ ಹರಕೆ ಹೊತ್ತರೆ ಸಂತಾನ ಭಾಗ್ಯ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
