ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಆದಂಪುರ ವಾಯುನೆಲೆಯಿಂದ ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
"ಪಾಕಿಸ್ತಾನದ ಮನವಿಯ ನಂತರ, ಭಾರತ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಪಾಕಿಸ್ತಾನ ಮತ್ತೆ ಭಯೋತ್ಪಾದಕ ಚಟುವಟಿಕೆಗಳನ್ನು ಅಥವಾ ಮಿಲಿಟರಿ ಧೈರ್ಯವನ್ನು ತೋರಿಸಿದರೆ ನಾವು ಸೂಕ್ತ ಉತ್ತರವನ್ನು ನೀಡುತ್ತೇವೆ. ಇದು ಹೊಸ ಭಾರತ ಎಂದು ನಾವು ಶತ್ರುಗಳಿಗೆ ನೆನಪಿಸುತ್ತಲೇ ಇರಬೇಕು. ಈ ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಮಾನವೀಯತೆಯ ಮೇಲೆ ದಾಳಿ ನಡೆದರೆ ಈ ಭಾರತವು ಯುದ್ಧಭೂಮಿಯಲ್ಲಿ ಶತ್ರುವನ್ನು ನೆಲಕ್ಕೆ ಕೆಡವಲು ಚೆನ್ನಾಗಿ ತಿಳಿದಿದೆ." ಎಂದು ಮೋದಿ ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆದಂಪುರ, ಮೇ 13: ಪಂಜಾಬಿನ ಆದಂಪುರ ವಾಯುನೆಲೆಯನ್ನು (Adampur Airbase) ಧ್ವಂಸ ಮಾಡಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆದಂಪುರ ವಾಯುನೆಲೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದು, ಇನ್ನೊಮ್ಮೆ ಭಯೋತ್ಪಾದನಾ ದಾಳಿಯ ಬಗ್ಗೆ ಯೋಚಿಸಿದವರ ಮತ್ತು ಅವರಿಗೆ ಕುಮ್ಮಕ್ಕು ನೀಡುವವರ ಮನೆಯೊಳಗೆ ನುಗ್ಗಿ ಹೊಡೆದು ಸಾಯಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಮಿಲಿಟರಿ ವಿಮಾನದಲ್ಲಿಯೇ ಪಂಜಾಬ್‌ನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿದರು. ಭಾರತದ ಆಪರೇಷನ್ ಸಿಂಧೂರ್ (Operation Sindoor) ಅನ್ನು ಅದ್ಭುತ ಯಶಸ್ಸಿಗೆ ಕಾರಣರಾದ ವಾಯುಪಡೆಯ ಸಿಬ್ಬಂದಿಯೊಂದಿಗೆ ಅವರು ಸಂವಾದ ನಡೆಸಿದರು. ವಾಯುಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಬಗ್ಗೆ ಭಾರತದ ಕಠಿಣ ನಿಲುವನ್ನು ಪುನರುಚ್ಚರಿಸಿದರು. “ಹಮ್ ಘರ್ ಮೇ ಘುಸ್ಕೇ ಮಾರೇಂಗೆ” (“ನಾವು ಮನೆಯೊಳಗೆ ನುಗ್ಗಿ ಹೊಡೆದು ಕೊಲ್ಲುತ್ತೇವೆ) ಎಂದಿದ್ದಾರೆ.
“ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಯಾವುದೇ ಸ್ಥಳವೂ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಭಾರತ ರವಾನಿಸಿದೆ. ನಾವು ಅವರನ್ನು ಧೂಳೀಪಟ ಮಾಡಿದ್ದೇವೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಶಾಂತಿಯುತವಾಗಿ ಬದುಕಲು ಯಾವುದೇ ಸ್ಥಳವೂ ಉಳಿದಿಲ್ಲ ಎಂಬ ಸಂದೇಶವನ್ನು ನಾವು ಅವರಿಗೆ ನೀಡಿದ್ದೇವೆ. ನಾವು ಅವರ ಮನೆಯೊಳಗೆ ನುಗ್ಗಿ ಹೊಡೆದಿದ್ದೇವೆ. ನಮ್ಮ ಧರ್ಮದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹಿಡಿಯುವುದು ನಮ್ಮ ಸಂಪ್ರದಾಯ. ಆದ್ದರಿಂದ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಕಸಿದುಕೊಂಡಾಗ ನಾವು ಭಯೋತ್ಪಾದಕರನ್ನು ಅವರ ಸ್ವಂತ ಮನೆಗಳಿಗೆ ನುಗ್ಗಿ ಹತ್ತಿಕ್ಕಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ