ಬಸನಗೌಡ ಯತ್ನಾಳ್ ವಿರುದ್ಧ ವರಿಷ್ಠರಿಗೆ ದೂರು ಸಲ್ಲಿಸಲು ನಾನು ದೆಹಲಿಗೆ ಬಂದಿಲ್ಲ: ಬಿವೈ ವಿಜಯೇಂದ್ರ

|

Updated on: Aug 27, 2024 | 1:27 PM

ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟ ಭಾರೀ ಯಶ ಕಂಡಿದೆ ಮತ್ತು ಅದರ ಪರಿಣಾಮವಾಗೇ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಬಿ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದು ಎಂದು ಹೇಳಿದ ವಿಜಯೇಂದ್ರ ಮುಂದಿನ ಕೆಲ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದರು.

ದೆಹಲಿ: ನಗರದಲ್ಲಿಂದು ಮಾಧ್ಯಮ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ , ತಾನು ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು ಪಕ್ಷದ ಸಂಘಟನೆ ಮತ್ತು ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತಾದ ಚರ್ಚೆಯೇ ಹೊರತು ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರ ವಿರುದ್ಧವೂ ದೂರು ಸಲ್ಲಿಸಿಲ್ಲ ಎಂದು ಹೇಳಿದರು. ಯತ್ನಾಳ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಕೆಲ ಮಾಜಿ ಸಂಸದರು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆಯೊಂದನ್ನು ನಡೆಸುವ ಬಗ್ಗೆ ಕೇಳಿದಾಗ ವಿಜಯೇಂದ್ರ, ಪಾದಯಾತ್ರೆ ಯಾರೇ ನಡೆಸಲಿ, ಅದು ಪಕ್ಷದ ಬೆಳವಣಿಗೆಗೆ ಪೂರಕವಾಗಿರಬೇಕು ಮತ್ತು ವರಿಷ್ಠರ ಅನುಮತಿ ಮೇರೆಗೆ ನಡೆದಿರಬೇಕು, ಹಾಗಾದಲ್ಲಿ ಮಾತ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ತನ್ನ ವಿರೋಧವೇನೂ ಇರಲ್ಲ ಎಂದರು. ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅಮಿತ್ ಶಾ ತನ್ನನ್ನು ರಾಜ್ಯಾಧ್ಯಕ್ಷ ಮಾಡಿದಾಗ ಕೆಲ ಹಿರಿಯ ನಾಯಕರಿಗೆ ಅದು ಇಷ್ಟವಾಗಿರಲಿಲ್ಲ ಅನ್ನೋದನ್ನು ಅಂಗೀಕರಿಸುತ್ತೇನೆ ಎಂದು ಹೇಳಿದ ವಿಜಯೇಂದ್ರ, ಅವರೆಲ್ಲ ತನ್ನ ಕಾರ್ಯಕ್ಷಮತೆ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಸಿದ್ದರಾಮಯ್ಯ ಇಳಿಸಲು ಡಿಕೆ ಶಿವಕುಮಾರ್ ಮಾತಿನಂತೆ ಬಿವೈ ವಿಜಯೇಂದ್ರ ಪಾದಯಾತ್ರೆ: ಯತ್ನಾಳ್ ಹೊಸ ಬಾಂಬ್

Follow us on