ಚಂಪಾ ಅವರಿಂದ ಬಹಳ ಪ್ರಭಾವಿತನಾಗಿದ್ದೆ, ಕೇವಲ ಅವರನ್ನು ನೋಡುವ ಉದ್ದೇಶದಿಂದ ಒಮ್ಮೆ ಧಾರವಾಡಕ್ಕೆ ಹೋಗಿದ್ದೆ: ಸಿದ್ದರಾಮಯ್ಯ
ನಿಜ ಅರ್ಥದಲ್ಲಿ ಬಂಡಾಯ ಧ್ವನಿಯಾಗಿದ್ದ ಚಂಪಾ ಅವರು ತಮ್ಮ ಬದುಕಿನುದ್ದಕ್ಕೂ ಅಸಾಮಾನತೆ, ಅನ್ಯಾಯ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದರು ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಸೋಮವಾರ ಆರಂಭವಾದ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ (Joint Assembly Session) ಅಗಲಿದ ಗಣ್ಯರಿಗೆ ಸಂತಾಪ (obituary) ಸೂಚಿಸಲಾಯಿತು. ಕಳೆದ ತಿಂಗಳು (ಜನೆವರಿ 10) ನಿಧನ ಹೊಂದಿದ ಹಿರಿಯ ಸಾಹಿತಿ ಪ್ರೊಫೆಸರ್ ಚಂದ್ರಶೇಖರ ಪಾಟೀಲ (Prof. Chandrashekar Patil) (ಚಂಪಾ) ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ವಿದ್ಯಾರ್ಥಿ ದೆಸೆಯಿಂದ ಚಂಪಾ ಅಭಿಮಾನಿಯಾಗಿದ್ದ ಸಿದ್ದರಾಮಯ್ಯ ಅವರನ್ನು ನೋಡಲೆಂದೇ 1974 ರಲ್ಲಿ ತಮ್ಮ ಸ್ನೇಹಿತರೊಬ್ಬರೊಂದಿಗೆ ಧಾರವಾಡಕ್ಕೆ ಹೋಗಿದ್ದರಂತೆ. ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಮತ್ತು ವಿದೇಶದಲ್ಲಿ ಅದೇ ಭಾಷೆಯ ಮೇಲೆ ಹೆಚ್ಚಿನ ವ್ಯಾಸಂಗ ಮಾಡಿದ್ದರೂ ಚಂಪಾ ಅವರಿಗೆ ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪಾರ ವ್ಯಾಮೋಹ. ಕನ್ನಡ ಭಾಷೆಯಲ್ಲಿ ಅವರು ಕವಿತೆ ರಚಿಸಿದ್ದಾರೆ, ನಾಟಕ ಮತ್ತು ಅಂಕಣಗಳನ್ನು ಬರೆದಿದ್ದಾರೆ. ಯುವ ಸಾಹಿತಿ, ಬರಹಗಾರರನ್ನು ಮುನ್ನೆಲೆ ತರಲು ಅವರು ಸಂಕ್ರಮಣ ಹೆಸರಿನ ಪತ್ರಿಕೆ ಆರಂಭಿಸಿದರು. ಅನೇಕ ಪ್ರತಿಭಾವಂತ ಯುವ ಸಾಹಿತಿಗಳಿಗೆ ಇದು ವೇದಿಕೆಯಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ನಿಜ ಅರ್ಥದಲ್ಲಿ ಬಂಡಾಯ ಧ್ವನಿಯಾಗಿದ್ದ ಚಂಪಾ ಅವರು ತಮ್ಮ ಬದುಕಿನುದ್ದಕ್ಕೂ ಅಸಾಮಾನತೆ, ಅನ್ಯಾಯ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದರು ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. ದಲಿತ ಮತ್ತು ಗೋಕಾಕ್ ಚಲುವಳಿ ಸೇರಿದಂತೆ ಹಲವಾರು ಚಳುವಳಿಗಳಲ್ಲಿ ಚಂಪಾ ಭಾಗವಹಿಸಿದರು. ತಮ್ಮ ನೇರ ನುಡಿಗಳಿಂದಾಗಿ ನಿಷ್ಠುರವಾದಿ ಎನಿಸಿಕೊಂಡಿದ್ದರು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕನ್ನಡದ ಪ್ರಖರ ಬರಹಗಾರರಲ್ಲಿ ಒಬ್ಬರಾಗಿದ್ದ ಚಂಪಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಹೇಳಿದ ಸಿದ್ದರಾಮಯ್ಯ, ಚಂಪಾರೊಂದಿಗೆ ವೈಯಕ್ತಿಕ ಒಡನಾಟ ಹೊಂದಿದ್ದ ತನಗೆ ಅತೀವ ದುಃಖವಾಗಿದೆ ಎಂದರು.