VIDEO: ಕ್ರೀಸ್ ಒಳಗೆ ಬ್ಯಾಟ್ ಇಟ್ಟರೂ ರನೌಟ್ ಆದ ಪಾಕ್ ಆಟಗಾರ್ತಿ..!
Muneeba Ali run out controversy: ಮೊದಲಿಗೆ ಬ್ಯಾಟ್ ಕ್ರೀಸ್ನಲ್ಲಿಟ್ಟ ಕಾರಣ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಮರು ಪರಿಶೀಲನೆ ವೇಳೆ ಚೆಂಡು ತಗುಲಿದಾಗ ಅವರು ಬ್ಯಾಟ್ ಮೇಲೆತ್ತಿರುವುದು ಗೋಚರಿಸಿತು. ಹೀಗಾಗಿ ಮೂರನೇ ಅಂಪೈರ್ ತನ್ನ ತೀರ್ಪು ಬದಲಿಸಿ ಔಟ್ ಎಂದರು. ಅಂದರೆ ಮುನೀಬಾ ಅಲಿ ಕ್ರೀಸ್ನಲ್ಲಿ ಬ್ಯಾಟ್ ಇಟ್ಟರೂ, ರನೌಟ್ ಆಗಿ ಹೊರ ನಡೆಯಬೇಕಾಯಿತು.
ಮಹಿಳಾ ಏಕದಿನ ವಿಶ್ವಕಪ್ನ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 247 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಲು ಆಗಮಿಸಿದ ಪಾಕಿಸ್ತಾನ್ ತಂಡವು 4 ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಅದು ಕೂಡ ರನೌಟ್ ರೂಪದಲ್ಲಿ ಎಂಬುದು ವಿಶೇಷ.
ಹೀಗೆ ರನೌಟ್ ಆಗಿದ್ದು ಆರಂಭಿಕ ಆಟಗಾರ್ತಿ ಮುನೀಬಾ ಅಲಿ. ನಾಲ್ಕನೇ ಓವರ್ನ ಕೊನೆಯ ಎಸೆತದಲ್ಲಿ ಚೆಂಡು ಮುನೀಬಾ ಪ್ಯಾಡ್ ಸವರಿ ಸಾಗಿತು. ಇತ್ತ ಟೀಮ್ ಇಂಡಿಯಾ ಆಟಗಾರ್ತಿಯರು ಎಲ್ಬಿಡಬ್ಲ್ಯೂಗೆ ಮನವಿ ಮಾಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ.
ಇದರ ನಡುವೆ ದೀಪ್ತಿ ಶರ್ಮಾ ಚೆಂಡನ್ನು ವಿಕೆಟ್ಗೆ ಎಸೆದರು. ಚೆಂಡು ವಿಕೆಟ್ಗೆ ತಾಗುವ ಮುನ್ನವೇ ಮುನೀಬಾ ಅಲಿ ಕ್ರೀಸ್ಗೆ ಒಳಗೆ ಬ್ಯಾಟ್ ಇಟ್ಟಿದ್ದರು. ಆದರೆ ಚೆಂಡು ವಿಕೆಟ್ಗೆ ತಗುಲಿದಾಗ ಮುನೀಬಾ ಕ್ರೀಸ್ ಹೊರಗಿದ್ದರು. ಅಲ್ಲದೆ ಕ್ರೀಸ್ನಲ್ಲಿಟ್ಟ ಬ್ಯಾಟ್ ಅನ್ನು ಮೇಲೆಕ್ಕೆತ್ತಿದ್ದರು.
ಮೊದಲಿಗೆ ಬ್ಯಾಟ್ ಕ್ರೀಸ್ನಲ್ಲಿಟ್ಟ ಕಾರಣ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಮರು ಪರಿಶೀಲನೆ ವೇಳೆ ಚೆಂಡು ತಗುಲಿದಾಗ ಅವರು ಬ್ಯಾಟ್ ಮೇಲೆತ್ತಿರುವುದು ಗೋಚರಿಸಿತು. ಹೀಗಾಗಿ ಮೂರನೇ ಅಂಪೈರ್ ತನ್ನ ತೀರ್ಪು ಬದಲಿಸಿ ಔಟ್ ಎಂದರು. ಅಂದರೆ ಮುನೀಬಾ ಅಲಿ ಕ್ರೀಸ್ನಲ್ಲಿ ಬ್ಯಾಟ್ ಇಟ್ಟರೂ, ರನೌಟ್ ಆಗಿ ಹೊರ ನಡೆಯಬೇಕಾಯಿತು.
ಇದಕ್ಕೆ ಮುಖ್ಯ ಕಾರಣ ಐಸಿಸಿ ನಿಯಮ. ರನೌಟ್ ನಿಯಮದ ಪ್ರಕಾರ, ಬ್ಯಾಟರ್‌ನ ದೇಹದ ಅಥವಾ ಬ್ಯಾಟ್‌ನ ಕೆಲವು ಭಾಗವು ಪಾಪಿಂಗ್ ಕ್ರೀಸ್‌ನ ಹಿಂದೆಯಿದ್ದರೆ, ಅವರನ್ನು ಕ್ರೀಸ್ನಿಂದ ಹೊರಗಿದ್ದಾರೆಂದು ಪರಿಗಣಿಸಲಾಗುತ್ತದೆ.
ಅದಾಗ್ಯೂ, ಒಬ್ಬ ಬ್ಯಾಟರ್ ತನ್ನ ಮೈದಾನದ ಕಡೆಗೆ ಮತ್ತು ಅದರಾಚೆಗೆ ಓಡುವಾಗ ಅಥವಾ ಡೈವಿಂಗ್ ಮಾಡುವಾಗ ಮತ್ತು ಅವನ/ಅವಳ ದೇಹದ ಅಥವಾ ಬ್ಯಾಟ್‌ನ ಕೆಲವು ಭಾಗವನ್ನು ಪಾಪಿಂಗ್ ಕ್ರೀಸ್‌ನ ಆಚೆಗೆ ನೆಲಕ್ಕೆ ತಾಗಿ ಆ ಬಳಿಕ ಅವನ/ಅವಳ ದೇಹದ ಅಥವಾ ಬ್ಯಾಟ್‌ನ ಯಾವುದೇ ಭಾಗದ ನಡುವೆ ಸಂಪರ್ಕ ತಪ್ಪಿದರೆ, ಅವರನ್ನು ಕ್ರೀಸ್ನಿಂದ ಹೊರಗೆ ಎಂದು ಎಂದು ಪರಿಗಣಿಸಲಾಗುವುದಿಲ್ಲ.
ಅಂದರೆ ರನ್ ಓಡುವಾಗ ಬ್ಯಾಟರ್‌ನ ಬ್ಯಾಟ್‌ನ ಅಥವಾ ದೇಹದ ಭಾಗ ಕ್ರೀಸ್ ಒಳಗೆ ಒಮ್ಮೆ ತಲುಪಿ ಆ ಬಳಿಕ ಬ್ಯಾಟ್ ಅಥವಾ ದೇಹವು ಗಾಳಿಯಲ್ಲಿದ್ದರೂ ಅಥವಾ ಕ್ರೀಸ್ನಿಂದ ಹೊರಗೆ ಬಿದ್ದರೂ ಅವರನ್ನು ಕ್ರೀಸ್ಗೆ ತಲುಪಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ಆದರೆ ಮುನೀಬಾ ವಿಷಯದಲ್ಲಿ, ಅವರು ರನ್ ಓಡುತ್ತಿರಲಿಲ್ಲ. ಬದಲಾಗಿ ಸ್ಟ್ರೈಕ್ನಲ್ಲಿ ನಿಂತು ಬ್ಯಾಟ್ ಒಳಕ್ಕೆ ಒಟ್ಟು ಮತ್ತೆ ಮೇಲೆಕ್ಕೆ ತೆಗೆದುಕೊಂಡಿದ್ದಾರೆ. ಅತ್ತ ಚೆಂಡು ಕೂಡ ಡೆಡ್ ಆಗಿರಲಿಲ್ಲ. ಇತ್ತ ಬ್ಯಾಟ್ ಕ್ರೀಸ್ನಿಂದ ಮೇಲಿದ್ದ ಕಾರಣ ಅದನ್ನು ರನೌಟ್ ಎಂದು ಪರಿಗಣಿಸಿದ್ದಾರೆ. ಅದರಂತೆ ಮುನೀಬಾ ಅಲಿ ಕ್ರೀಸ್ನಲ್ಲಿ ಬ್ಯಾಟ್ ಇಟ್ಟರೂ, ಆ ಮೇಲೆ ಮೈಮರೆತು ವಿಚಿತ್ರವಾಗಿ ರನೌಟ್ ಆಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 248 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 43 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಗುವ ಮೂಲಕ 88 ರನ್ಗಳಿಂದ ಸೋಲೊಪ್ಪಿಕೊಂಡಿದೆ.

