VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
IPL 2025 MI vs CSK: ಐಪಿಎಲ್ನ ಮೂರನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 155 ರನ್ ಕಲೆಹಾಕಿದರೆ, ಸಿಎಸ್ಕೆ 19.1 ಓವರ್ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿ ಗೆದ್ದಿದೆ.
ಐಪಿಎಲ್ನ (IPL 2025) ಮೂರನೇ ಪಂದ್ಯವು ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿತ್ತು. ಈ ಪೈಪೋಟಿಯಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆದ್ದು ಬೀಗಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 116 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರು.
ಈ ಹಂತದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ರವೀಂದ್ರ ಜಡೇಜಾ 18 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿದ್ದರು. ಆದರೆ 19ನೇ ಓವರ್ನ 4ನೇ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ ರನೌಟ್ ಆಗಬೇಕಾಯಿತು. ಇತ್ತ ರವೀಂದ್ರ ಜಡೇಜಾ ರನೌಟ್ ಆಗುತ್ತಿದ್ದಂತೆ ಅತ್ತ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.
ಅದರಲ್ಲೂ ರಿಪ್ಲೇನಲ್ಲಿ ರವೀಂದ್ರ ಜಡೇಜಾ ಔಟ್ ಎಂಬುದು ತಿಳಿಯುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿದರು. ಇಂತಹದೊಂದು ಸಂಭ್ರಮಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ ಆಗಮಿಸಲಿರುವುದು.
ಇದೀಗ ರವೀಂದ್ರ ಜಡೇಜಾ ಔಟ್ ಆಗಿವುದನ್ನು ಸಂಭ್ರಮಿಸುತ್ತಿರುವ ಸಿಎಸ್ಕೆ ಫ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಿದೆ.