ಕ್ರೀಡಾ ಸ್ಫೂರ್ತಿ ಅಲ್ಲ… ರಿಷಭ್ ಪಂತ್ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
IPL 2025 RCB vs LSG: ಇಂಡಿಯನ್ ಪ್ರೀಮಿಯರ್ ಲೀಗ್ನ 70ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 227 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್ಸಿಬಿ 6 ವಿಕೆಟ್ಗಳ ಜಯ ಸಾಧಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 70ನೇ ಪಂದ್ಯದಲ್ಲಿ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಈ ನಾಟಕೀಯತೆ ನಡುವೆ ಕ್ರೀಡಾ ಸ್ಪೂರ್ತಿಯ ನಾಟಕ ಮಾಡಿದ್ದು ರಿಷಭ್ ಪಂತ್. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 227 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 16.5 ಓವರ್ಗಳಲ್ಲಿ 199 ರನ್ ಕಲೆಹಾಕಿತು. ಆದರೆ 17ನೇ ಓವರ್ನ ಕೊನೆಯ ಎಸೆತದಲ್ಲಿ ದಿಗ್ವೇಶ್ ರಾಥಿ ನಾನ್ ಸ್ಟ್ರೈಕ್ನಲ್ಲಿದ್ದ ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ರನೌಟ್ ಮಾಡಿದ್ದರು. ಚೆಂಡೆಸೆಯುವ ಮುನ್ನ ಕ್ರೀಸ್ ತೊರೆದಿದ್ದ ಜಿತೇಶ್ ಅವರನ್ನು ಗಮನಿಸಿದ ದಿಗ್ವೇಶ್ ಬೌಲಿಂಗ್ ಮಾಡದೇ ಬೇಲ್ಸ್ ಎಗರಿಸಿದರು. ಅಲ್ಲದೆ ರನೌಟ್ಗಾಗಿ ಅಂಪೈರ್ಗೆ ಮನವಿ ಸಲ್ಲಿಸಿದರು.
ಇತ್ತ ಮೂರನೇ ಅಂಪೈರ್ಗೆ ಮನವಿ ಸಲ್ಲಿಸಿದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಈ ಮನವಿಯನ್ನು ಹಿಂಪಡೆದಿರಲಿಲ್ಲ ಎಂಬುದು ವಿಶೇಷ. ಬದಲಾಗಿ ಟಿವಿ ಅಂಪೈರ್ ತೀರ್ಪಿಗಾಗಿ ಕಾದು ನಿಂತಿದ್ದರು. ಅತ್ತ ಬಿಗ್ ಸ್ಕ್ರೀನ್ನಲ್ಲಿ ಮೂರನೇ ಅಂಪೈರ್ ನಾಟೌಟ್ ನೀಡುತ್ತಿದ್ದಂತೆ, ಇತ್ತ ಕಡೆಯಿಂದ ರಿಷಭ್ ಪಂತ್ ಮನವಿಯನ್ನು ಹಿಂಪಡೆದರು ಎಂಬುದು ಇಲ್ಲಿ ಉಲ್ಲೇಖಾರ್ಹ.
ಈ ಹಿಂದೆ ಕ್ರಿಕೆಟ್ ಅಂಗಳದಲ್ಲಿ ಮಂಕಡಿಂಗ್ ನಡೆದಾಗ, ಮೂರನೇ ಅಂಪೈರ್ ತೀರ್ಪಿಗೂ ಮುನ್ನ ಹಲವು ನಾಯಕರುಗಳು ಮನವಿಯನ್ನು ಹಿಂಪಡೆದು ಕ್ರೀಡಾ ಸ್ಪೂರ್ತಿ ಮೆರೆದಿದ್ದರು. ಆದರೆ ರಿಷಭ್ ಪಂತ್ ಮಾತ್ರ, ತೀರ್ಪು ಲಕ್ನೋ ಸೂಪರ್ ಜೈಂಟ್ಸ್ ಪರ ಬರಲಿದೆಯಾ ಎಂಬುದನ್ನು ಕಾದು ನೋಡಿದ್ದರು.
ಆದರೆ ದಿಗ್ವೇಶ್ ರಾಥಿ ತನ್ನ ಬೌಲಿಂಗ್ ಆಕ್ಷನ್ ಪೂರ್ಣಗೊಳಿಸಿದ ಬಳಿಕ ರನೌಟ್ ಮಾಡಿದ್ದರು. ಮಂಕಡ್ ರನೌಟ್ ನಿಯಮದ ಪ್ರಕಾರ, ಬೌಲರ್ ತನ್ನ ಬೌಲಿಂಗ್ ಆಕ್ಷನ್ ಪೂರ್ಣಗೊಳಿಸಲು ದಾಪುಗಾಲಿಟ್ಟು ನಾನ್-ಸ್ಟ್ರೈಕರ್ನ ರನೌಟ್ ಮಾಡುವಂತಿಲ್ಲ. ಇತ್ತ ದಿಗ್ವೇಶ್ ರಾಥಿ ತನ್ನ ಮುಂದಿನ ಪಾದವನ್ನು ಕ್ರೀಸ್ ಮೇಲಿಟ್ಟು ಬೌಲಿಂಗ್ ಆ್ಯಕ್ಷನ್ ತೋರಿಸಿ, ಹಿಂತಿರುಗಿ ರನೌಟ್ ಮಾಡಿದ್ದರು. ಹೀಗಾಗಿಯೇ ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದಿದ್ದರು.
ಇತ್ತ ಮೂರನೇ ಅಂಪೈರ್ ತೀರ್ಪು ಬರುತ್ತಿದ್ದಂತೆ ರಿಷಭ್ ಪಂತ್ ಮನವಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇದೀಗ ವಿಡಿಯೋ ವೈರಲ್ ಆಗಿದ್ದು, ಇಲ್ಲಿ ಕ್ರೀಡಾ ಸ್ಫೂರ್ತಿ ವಿಷಯ ಎಲ್ಲಿ ಬಂತು ಅನೇಕುರು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಕ್ರೀಡಾ ಸ್ಫೂರ್ತಿ ಮೆರೆಯುವ ಉದ್ದೇಶವಿದ್ದಿದ್ದರೆ ಪಂತ್ ದಿಗ್ವೇಶ್ ರಾಥಿ ಮನವಿ ಮಾಡಿದಾಗಲೇ ತಡೆಯಬಹುದಿತಲ್ಲವೇ ಎಂಬ ಪ್ರಶ್ನೆಯನ್ನು ಸಹ ಅನೇಕು ಮುಂದಿಟ್ಟಿದ್ದಾರೆ. ಹೀಗಾಗಿಯೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನದ್ದು ಕ್ರೀಡಾ ಸ್ಫೂರ್ತಿ ಅಲ್ಲ, ಬದಲಾಗಿ ನಾಟಕ ಎಂದು ನೆಟ್ಟಿಗರು ಜರಿದಿದ್ದಾರೆ.