ಇದು ಅಂತಿಂಥ ದಾಖಲೆಯಲ್ಲ; ವೈಭವ್ ಸೇರಿದಂತೆ ಮೂವರು ಆಟಗಾರರು ಸೊನ್ನೆಗೆ ಔಟ್..!
IPL 2026: Praful Hinge's Historic Debut: ಐಪಿಎಲ್ 2026ರ 21ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಪದಾರ್ಪಣೆ ಮಾಡಿದ ಪ್ರಫುಲ್, ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆ ನಿರ್ಮಿಸಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೌಲಿಂಗ್ ಮಾಡಿದ ತಮ್ಮ ಮೊದಲ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಪ್ರಫುಲ್, ಈ ಮೂವರು ಬ್ಯಾಟ್ಸ್‌ಮನ್‌ಗಳಿಗೆ ಒಂದೂ ರನ್ ಗಳಿಸಲು ಬಿಡಲಿಲ್ಲ. ಐಪಿಎಲ್ ಚರಿತ್ರೆಯಲ್ಲೇ ಚೊಚ್ಚಲ ಪಂದ್ಯದಲ್ಲಿ ಇಂತಹ ಐತಿಹಾಸಿಕ ಸಾಧನೆ ಮಾಡಿದ ಮೊದಲ ವೇಗಿ ಇವರಾಗಿದ್ದಾರೆ.
ಐಪಿಎಲ್ 2026 ರ 21 ನೇ ಪಂದ್ಯ ಐಪಿಎಲ್ ಇತಿಹಾಸದಲ್ಲೇ ಕಂಡು ಕೇಳರಿಯದೆ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಪ್ರಫುಲ್ ಹಿಂಗೆ ಐಪಿಎಲ್ ಇತಿಹಾಸದಲ್ಲೇ ಯಾವ ಆಟಗಾರನೂ ಮಾಡಿರದ ಮತ್ತು ಮುಂದೆ ಮಾಡಲು ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ ಪ್ರಫುಲ್ ತಾವು ಬೌಲ್ ಮಾಡಿದ ಮೊದಲ ಓವರ್ನಲ್ಲೇ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಇದರಲ್ಲಿ ವಿಶೇಷತೆ ಅಂದರೆ ಈ ಮೂವರು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಯಾವ ವೇಗಿಯೂ ಈ ಸಾಧನೆ ಮಾಡಿರಲಿಲ್ಲ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 216 ರನ್ ಕಲೆಹಾಕಿತು. ರಾಜಸ್ಥಾನ ತಂಡದ ಬ್ಯಾಟಿಂಗ್ ಬಲಿಷ್ಠವಾಗಿರುವ ಕಾರಣ, ಈ ಪಂದ್ಯದಲ್ಲೂ ರಾಜಸ್ಥಾನದ್ದೇ ಗೆಲುವು ಎಂಬುದು ಖಚಿತವಾಗಿತ್ತು. ಆದರೆ ಸನ್‌ರೈಸರ್ಸ್ ಪರ ಬೌಲಿಂಗ್ ಆರಂಭಿಸಿದ ಪ್ರಫುಲ್ ಮೊದಲ ಓವರ್ನಲ್ಲೇ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು.
ಸನ್‌ರೈಸರ್ಸ್ ಪರ ಪ್ರಫುಲ್ ಬೌಲಿಂಗ್ ಆರಂಭಿಸಿದರೆ, ಇತ್ತ ರಾಜಸ್ಥಾನ್ ಪರ ಜೈಸ್ವಾಲ್ ಹಾಗೂ ವೈಭವ್ ಬ್ಯಾಟಿಂಗ್ ಆರಂಭಿಸಿದರು. ಮೊದಲ ಎಸೆತದಲ್ಲಿ ಜೈಸ್ವಾಲ್ ಸಿಂಗಲ್ ತೆಗೆದುಕೊಂಡರು. ನಂತರ ಸ್ಟ್ರೈಕ್ಗೆ ಬಂದ ವೈಭವ್ ಎಂದಿನಂತೆ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸಿ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಬಂದ ಧೃವ್ ಜುರೇಲ್ ಕೂಡ ಎದುರಿಸಿದ ಎರಡನೇ ಎಸೆತದಲ್ಲಿ ಬೌಲ್ಡ್ ಆದರು. ಇವರಿಬ್ಬರಿಗೆ ಖಾತೆಯನ್ನು ತೆರೆಯಲಾಗಲಿಲ್ಲ.
ಕಳೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿ ಹಾಲಿ ಚಾಂಪಿಯನ್ ಆರ್ಸಿಬಿ ತಂಡವನ್ನು ಮಣಿಸುವಲ್ಲಿ ವೈಭವ್ ಹಾಗೂ ಧೃವ್ ಜುರೇಲ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈ ಪಂದ್ಯದಲ್ಲಿ ಇವರಿಬ್ಬರಿಗೆ ಖಾತೆಯನ್ನೇ ತೆರೆಯಲಾಗಲಿಲ್ಲ. ಇವರಿಬ್ಬರ ವಿಕೆಟ್ ಪತನದ ಬಳಿಕ ಬಂದ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಕೂಡ ಆ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಇವರಿಗೂ ಖಾತೆ ತೆರೆಯಲು ಆಗಲಿಲ್ಲ.
ಅಂದರೆ ಪಾದಾರ್ಪಣೆ ಪಂದ್ಯದಲ್ಲಿ ಇನ್ನಿಂಗ್ಸ್ನ ಮೊದಲ ಓವರ್ ಬೌಲ್ ಮಾಡಿದ ಪ್ರಫುಲ್, ಈ ಓವರ್‌ನಲ್ಲಿ ಕೇವಲ 1 ರನ್ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಈ ಮೂವರು ಆಟಗಾರರು ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದು, ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದು ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ