ಕಿಂಗ್ ಕೊಹ್ಲಿಯನ್ನು ಮುತ್ತಿದ ಫ್ಯಾನ್ಸ್, ಹೊರಬರಲಾಗದೆ ಒದ್ದಾಡಿದ ವಿರಾಟ್; ವಿಡಿಯೋ ವೈರಲ್
Virat Kohli: ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿ 'ಕೊಹ್ಲಿ.. ಕೊಹ್ಲಿ..' ಎಂದು ಘೋಷಣೆ ಕೂಗಿ ಅವರನ್ನು ಮುತ್ತಿದರು. ಇದರಿಂದ ಕೊಹ್ಲಿ ತಮ್ಮ ಕಾರು ತಲುಪಲು ಹರಸಾಹಸ ಪಡಬೇಕಾಯಿತು. ಭದ್ರತಾ ಸಿಬ್ಬಂದಿಗಳು ಜನಸಂದಣಿಯನ್ನು ನಿಯಂತ್ರಿಸಲು ಶ್ರಮಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಜನವರಿ 11 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದೆ. ಈ ಸರಣಿಗಾಗಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬುಧವಾರ ಸಂಜೆ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆದರೆ ಕೊಹ್ಲಿ ಅವರ ಆಗಮನದ ಬಗ್ಗೆ ತಿಳಿದಿದ್ದ ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ್ದು ವಿರಾಟ್ ಹೊರಬಂದ ತಕ್ಷಣ ‘ಕೊಹ್ಲಿ.. ಕೊಹ್ಲಿ..’ ಎಂಬ ಘೋಷಣೆಗಳೊಂದಿಗೆ ಅವರನ್ನು ಸುತ್ತುವರೆದಿದ್ದಾರೆ. ಇದರಿಂದಾಗಿ ಕೊಹ್ಲಿ ಆ ಜನಜಂಗುಳಿಯನ್ನು ದಾಟಿ ತಮ್ಮ ಕಾರಿಗೆ ಹತ್ತಲು ಸಾಕಷ್ಟು ಹರಸಾಹಸ ಪಡಬೇಕಾಯಿತು.
ವಿಮಾನ ನಿಲ್ದಾಣದಿಂದ ಹೊರಬಂದ ವಿರಾಟ್ ಕೊಹ್ಲಿ ತಮ್ಮ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿದ್ದರು. ಇದರಿಂದಾಗಿ ಭದ್ರತಾ ಸಿಬ್ಬಂದಿಗಳು ಕೊಹ್ಲಿಯನ್ನು ಸುರಕ್ಷಿತವಾಗಿ ಕಾರಿನ ಬಳಿ ಕರೆದೊಯ್ಯಲು ಶ್ರಮಿಸಬೇಕಾಯಿತು. ಒಂದು ಹಂತದಲ್ಲಿ, ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು, ಇದರಿಂದ ವಿರಾಟ್ ಕೂಡ ಸ್ವಲ್ಪ ಕಸಿವಿಸಿಗೊಂಡರು. ಆದಾಗ್ಯೂ, ಅವರು ತಾಳ್ಮೆಯಿಂದ ಮುಗುಳ್ನಕ್ಕು, ಕೆಲವು ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿ ಕಾರಿನಲ್ಲಿ ಹೊರಟುಹೋದರು. ಪ್ರಸ್ತುತ, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

