ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ವಿಡಿಯೋ ತೋರಿಸಿ ಆರೋಪ ಮಾಡಿದ ಜನಾರ್ದನ ರೆಡ್ಡಿ

Updated on: Jan 03, 2026 | 3:44 PM

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ನಾರಾ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಾಂಜಾ ಪೆಡ್ಲರ್ ದೌಲ ಜೊತೆ ಭರತ್ ರೆಡ್ಡಿ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ವಿಡಿಯೋ ಸಾಕ್ಷಿ ಇದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರ ಬಂಧನಕ್ಕೆ ಆಗ್ರಹಿಸಿದ್ದಾರೆ.

ಬಳ್ಳಾರಿ, ಜನವರಿ 3: ಗಾಂಜಾ ಪೆಡ್ಲರ್ ಜೊತೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಇದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿಡಿಯೋ ಪ್ರದರ್ಶಿಸಿ ಈ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ತಮ್ಮ ಮನೆ ಮುಂದೆ ಫೈರಿಂಗ್ ಘಟನೆ ವಿಚಾರವಾಗಿ ಭರತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಎಂಬಾತನ ಜೊತೆ ಇದ್ದ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ವಿಡಿಯೋದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಜೊತೆಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ದೃಶ್ಯಗಳು ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೌಲಾ ಮೇಲೆ 50 ಕೆಜಿ ಗಾಂಜಾ ಪೆಡ್ಲಿಂಗ್ ಸೇರಿದಂತೆ 18 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಫೈರಿಂಗ್ ವಿಚಾರದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತರನಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಾದ ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಸೇರಿದಂತೆ ಇತರರು ಆಗ್ರಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರವನ್ನು ಒತ್ತಾಯಿಸಿ, ಇಲ್ಲವಾದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನಾಯಕ ಶ್ರೀರಾಮುಲು ಕೂಡ ಭರತ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ